
ಜೈಪುರ್: ರಾಜಸ್ತಾನ ಮಾಜಿ ಡಿಸಿಎಂ ಸಚಿನ್ ಪೈಲಟ್ ಮತ್ತು ಬೆಂಬಲಿಗ 18 ಶಾಸಕರಿಗೆ ಶಾಸಕಾಂಗ ಸಭೆಗೆ ಗೈರು ಹಾಜರಾದ ಹಿನ್ನಲೆ ನೋಟಿಸ್ ನೀಡಲಾಗಿದೆ.
ವಿಪ್ ಉಲ್ಲಂಘಿಸಿದ ಕಾರಣಕ್ಕೆ ಅನರ್ಹಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ನೋಟಿಸ್ ಜಾರಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸ್ಪೀಕರ್ ನೋಟಿಸ್ ನೀಡಿರುವ ಕ್ರಮ ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್ ಗೆ ಸಚಿನ್ ಪೈಲಟ್ ಮತ್ತು ಬೆಂಬಲಿಗರು ಅರ್ಜಿ ಸಲ್ಲಿಸಿದ್ದಾರೆ.
ಹೈಕೋರ್ಟ್ ನಲ್ಲಿ ಪೈಲಟ್ ಮತ್ತು ಸಂಗಡಿಗರ ಅರ್ಜಿ ವಿಚಾರಣೆ ನಡೆಯಲಿದ್ದು ಸಚಿನ್ ಪೈಲಟ್ ಪರವಾಗಿ ಖ್ಯಾತ ವಕೀಲರಾದ ಹರೀಶ್ ಸಾಳ್ವೆ, ಮುಕುಲ್ ರೋಹಟಗಿ ವಾದ ಮಂಡಿಸಲಿದ್ದಾರೆ.
ಸ್ಪೀಕರ್ ನೋಟಿಸ್ ಸಂವಿಧಾನಾತ್ಮಕವಾಗಿ ಅಮಾನ್ಯವಾಗಿದ್ದು ಅವರ ನೋಟಿಸ್ ರದ್ದುಪಡಿಸಬೇಕೆಂದು ಹೇಳಲಾಗಿದೆ. ವಿಧಾನಸಭೆ ಹೊರಗಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲು ಸಾಧ್ಯವಿಲ್ಲ. ಅನರ್ಹತೆಯ ಬಗ್ಗೆ ಸ್ಪೀಕರ್ ನೀಡಿದ ನೋಟಿಸ್ ರದ್ದು ಕೋರಿ ಅರ್ಜಿ ಸಲ್ಲಿಸಲಾಗಿದೆ. ನೋಟಿಸ್ ರದ್ದು ಕೋರಿ ತರಾತುರಿಯಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ ಅರ್ಜಿಯಲ್ಲಿ ಕೆಲವು ಮಾರ್ಪಾಡು ಮಾಡಬೇಕು ಎಂದು ಸಚಿನ್ ಪೈಲಟ್ ಪರ ವಕೀಲರು ಮನವಿ ಮಾಡಲಿದ್ದಾರೆ.