ಭೋಪಾಲ ರೈಲ್ವೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಜವಾನ ಇಂದರ್ ಸಿಂಗ್ ಯಾದವ್ ಈಗ ಜಾಲತಾಣದಲ್ಲಿ ನೆಟ್ಟಿಗರ ಮನಗೆದ್ದಿದ್ದಾರೆ. ಏಕೆ ಗೊತ್ತಾ?
ಕೊರೊನಾ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಶ್ರಮಿಕ್ ರೈಲುಗಳಲ್ಲಿ ಸಂಚರಿಸುತ್ತಿದ್ದಾರೆ. ಇದೇ ರೀತಿ ಬೆಂಗಳೂರಿನಿಂದ ತಾಯಿಯೊಬ್ಬಳು ತನ್ನ ಮೂರು ತಿಂಗಳ ಮಗುವಿನೊಂದಿಗೆ ಉತ್ತರ ಪ್ರದೇಶದ ಗೋರಕ್ ಪುರ್ ಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮಗುವಿಗೆ ಹಾಲು ಲಭ್ಯವಾಗಿರಲಿಲ್ಲ..
ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ರೈಲು ನಿಂತಿದ್ದ ವೇಳೆ ಅಲ್ಲೇ ಇದ್ದ ಆರ್.ಪಿ.ಎಫ್. ಕಾನ್ಸ್ಟೇಬಲ್ ಇಂದರ್ ಸಿಂಗ್ ಯಾದವ್ ಅವರಿಗೆ ಹಾಲು ತಂದು ಕೊಡಲು ಆಕೆ ಕೋರಿದರು.
ಇಂದರ್ ಸಿಂಗ್ ತಕ್ಷಣವೇ ರೈಲ್ವೆ ನಿಲ್ದಾಣದ ಹೊರಗೆ ಓಡಿಹೋಗಿ ಹಾಲಿನ ಪ್ಯಾಕೆಟ್ ತರುವಷ್ಟರಲ್ಲಿ ರೈಲು ಸಂಚಾರ ಆರಂಭಿಸಿತ್ತು. ಆದರೆ ಛಲ ಬಿಡದ ಆತ ಒಂದು ಕೈಯಲ್ಲಿ ರೈಫಲ್ ಮತ್ತೊಂದು ಕೈಯಲ್ಲಿ ಹಾಲಿನ ಪ್ಯಾಕೆಟ್ ಹಿಡಿದು ರೈಲನ್ನು ಬೆನ್ನಟ್ಟಿ, ಕಿಟಕಿ ಮೂಲಕ ಮಗುವಿನ ತಾಯಿ ಸಫಿಯಾ ಅವರಿಗೆ ಹಾಲು ಹಸ್ತಾಂತರಿಸಿದರು.
ಈ ಘಳಿಗೆಗಳು ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಅದೀಗ ವೈರಲ್ ಆಗಿದೆ. ಖುದ್ದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಇಂದರ್ ಸಿಂಗ್ ಅವರ ಕರ್ತವ್ಯ ಪ್ರಜ್ಞೆ ಶ್ಲಾಘಿಸಿ ನಗದು ಪ್ರಶಸ್ತಿ ಘೋಷಿಸಿದ್ದಾರೆ.