ಬಾಲಿವುಡ್ನ ಪ್ರಖ್ಯಾತ ಸಿನಿಮಾ ʼಬಂಟಿ ಔರ್ ಬಬ್ಲಿʼಯ ಕತೆ ನಿಮಗೆ ನೆನಪಿದೆಯೇ..? 2005ರಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ರಾಣಿ ಮುಖರ್ಜಿ ಹಾಗೂ ಅಭಿಷೇಕ್ ಬಚ್ಚನ್ ಜೋಡಿಯಾಗಿ ನಟಿಸಿದ್ದರು.
ಇದರಲ್ಲಿ ಅಭಿಷೇಕ್ ಹಾಗೂ ರಾಣಿ ಇಬ್ಬರೂ ಕಳ್ಳತನ ಮಾಡುವ ಜೋಡಿಯಾಗಿದ್ದರೆ ಅಮಿತಾಬ್ ಬಚ್ಚನ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದರು. ಇದೇ ಸಿನಿಮಾದಿಂದ ಪ್ರೇರಣೆ ಪಡೆದು ಮಹಾರಾಷ್ಟ್ರದ ಥಾಣೆಯಲ್ಲಿ ವ್ಯಕ್ತಿಯೊಬ್ಬರಿಗೆ ನಕಲಿ ಚಿನ್ನಾಭರಣವನ್ನ ನೀಡಿ 4 ಲಕ್ಷ ರೂಪಾಯಿ ಪೀಕಲಾಗಿದೆ.
ಗುಜರಾತ್ನ ವಾಪಿ ಎಂಬಲ್ಲಿ ಪೂರ್ವಜರ ಆಸ್ತಿಯನ್ನ ಉತ್ಖನನ ಮಾಡುವ ವೇಳೆ ಈ ನೆಕ್ಲೇಸ್ ಪತ್ತೆಯಾಗಿದೆ ಎಂದು ವ್ಯಾಪಾರಿಯನ್ನ ನಂಬಿಸಲಾಗಿದೆ. ಆರ್ಥಿಕ ಸಂಕಷ್ಟದಲ್ಲಿ ಇರುವ ಕಾರಣ ಈ ನೆಕ್ಲೇಸ್ನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದ ಜೋಡಿ ವ್ಯಾಪಾರಿ ಬಳಿ 4 ಲಕ್ಷ ರೂಪಾಯಿಯನ್ನ ದೋಚಿದೆ.
ವ್ಯಾಪಾರಿಯ ವಿಶ್ವಾಸವನ್ನ ಗಳಿಸುವ ಸಲುವಾಗಿ ಮೊದಲು ಎರಡು ಚಿನ್ನದ ಮಣಿಯನ್ನ ತೋರಿಸಿದ್ದಾರೆ. ಇದು ನಿಜವಾದ ಚಿನ್ನದ ಮಣಿಯಾಗಿದ್ದರಿಂದ ಸಂಪೂರ್ಣ ಸರ ಚಿನ್ನದ್ದೇ ಆಗಿರಲಿದೆ ಎಂದು ನಂಬಿದ ವ್ಯಾಪಾರಿ ಈ ನಕಲಿ ಸರವನ್ನ ಖರೀದಿ ಮಾಡಿದ್ದ.
ಆದರೆ ಬಳಿಕ ತಾನು ಮೋಸ ಹೋಗಿರುವ ವಿಚಾರ ವ್ಯಾಪಾರಿಯ ಗಮನಕ್ಕೆ ಬಂದಿದ್ದು ವ್ಯಾಗಲ್ ಎಸ್ಟೇಟ್ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.