ಅತಿಯಾದ ರಕ್ತದೊತ್ತಡದಿಂದ ಹೈದರಾಬಾದ್ನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ನಟ ಹಾಗೂ ರಾಜಕಾರಣಿ ರಜಿನಿಕಾಂತ್ ಆರೋಗ್ಯದಲ್ಲಿ ಪ್ರಗತಿ ಕಂಡು ಬರುತ್ತಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಆದರೂ ರಜಿನಿಕಾಂತ್ ರಕ್ತದೊತ್ತಡ ಈಗಲೂ ಕೂಡ ಅಗತ್ಯಕ್ಕಿಂತ ಜಾಸ್ತಿಯೇ ಇದೆ ಎಂದು ಹೇಳಲಾಗಿದೆ.
70 ವರ್ಷದ ಸೂಪರ್ಸ್ಟಾರ್ ರಜಿನಿಕಾಂತ್ ಅನ್ನಾತೆ ಸಿನಿಮಾ ಶೂಟಿಂಗ್ಗಾಗಿ ಹೈದರಾಬಾದ್ನಲ್ಲಿ ಬೀಡು ಬಿಟ್ಟಿದ್ದರು. ಆದರೆ ಚಿತ್ರತಂಡ ಕೆಲ ಸದಸ್ಯರಿಗೆ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಶೂಟಿಂಗ್ ರದ್ದುಗೊಳಿಸಲಾಗಿತ್ತು.
ರಜನಿಕಾಂತ್ ಕೂಡ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಹಾಗೂ ಅವರ ವರದಿ ನೆಗೆಟಿವ್ ಬಂದಿತ್ತು. ಇದಾದ ಬಳಿಕ ರಜಿನಿಕಾಂತ್ ರಕ್ತದೊತ್ತಡದಲ್ಲಿ ಗಮನಾರ್ಹ ಏರಿಕೆ ಕಂಡು ಬಂದ ಹಿನ್ನೆಲೆ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ತಮಿಳುನಾಡು ಸಿಎಂ ಈ. ಪಳನಿಸ್ವಾಮಿ ಇಂದು ರಜಿನಿಕಾಂತ್ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದು ಮಾತ್ರವಲ್ಲದೇ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.