ಕೃಷಿ ಉತ್ಪನ್ನ ಮಾರುಕಟ್ಟೆ ಸಂಬಂಧ ಕೇಂದ್ರ ಸರ್ಕಾರ ತಂದಿರುವ ಮೂರು ಹೊಸ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ಪಂಜಾಬ್ ರೈತರ ಪ್ರತಿಭಟನೆ ದಿನೇ ದಿನೇ ರಂಗು ಪಡೆಯುತ್ತಿದೆ.
ಧರಣಿ ಕುಳಿತ ರೈತರು ಇದ್ದಲ್ಲಿಗೆ ರೋಟಿ ಯಂತ್ರಗಳು, ಹೈ-ಟೆಕ್ ಸೋಲಾರ್ ಪ್ಯಾನೆಲ್ಗಳು, ವಾಶಿಂಗ್ ಮಷಿನ್ಗಳು ಆಗಮಿಸಿದ್ದಲ್ಲದೇ ಇದೀಗ ’ಮೇಡ್ ಇನ್ ಪಂಜಾಬ್’ ಗೀಸರ್ʼಗಳೂ ಸಹ ಬಂದು ಸೇರಿಕೊಂಡಿವೆ. ಈ ಮೂಲಕ ಇಲ್ಲಿನ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಬಹಳ ವ್ಯವಸ್ಥಿತವಾಗಿ ಸಾಗುತ್ತಿವೆ.
ಸೌದೆ ಬಳಸಿಕೊಂಡು ನೀರು ಕಾಯಿಸಿಕೊಳ್ಳಬಲ್ಲ ಈ ಗೀಸರ್ನಲ್ಲಿ ಒಂದು ಕಡೆ ತಣ್ಣೀರನ್ನು ಹಾಕಲು ಫನಲ್ ರೀತಿಯ ರಂಧ್ರವಿದ್ದು, ಮತ್ತೊಂದು ಕಡೆ ಕೊಳವೆ ಮುಖಾಂತರ ಬಿಸಿ ನೀರನ್ನು ಪಡೆದುಕೊಳ್ಳಬಹುದಾಗಿದೆ.
“ಇದು ಪಂಜಾಬೀ ಜುಗಾಡ್. ನಾವು ಇದನ್ನು ದೇಸೀ ಗೀಸರ್ ಎಂದು ಕರೆಯುತ್ತೇವೆ. ಪಂಜಾಬ್ ಪ್ರತಿ ಮನೆಯಲ್ಲೂ ಈ ಗೀಸರ್ ಇರುತ್ತದೆ. ನಾವು ಇದನ್ನು ಇಲ್ಲೂ ಹೊಂದಿದ್ದೇವೆ. ಈ ಗೀಸರ್ ಅನ್ನು ನಮಗೆ ಲಂಗರ್ನಲ್ಲಿ ಬಳಸಲು ಕೊಡಲಾಗಿದೆ. ಇದನ್ನು ಯಾರು ಬೇಕಾದರೂ ಬಳಸಬಹುದಾಗಿದೆ” ಎಂದು ಪ್ರತಿಭಟನಾಕಾರರಿಗೆ ಖೀರು ತಯಾರಿಸುತ್ತಿದ್ದ ಮಂಜೀಂದರ್ ಸಿಂಗ್ ತಿಳಿಸಿದ್ದಾರೆ.