ರಾಜಕುಮಾರನನ್ನ ಮದುವೆಯಾಗೋ ಕನಸು ಪ್ರತಿಯೊಬ್ಬ ಯುವತಿಯರಿಗೂ ಇರುತ್ತೆ. ಆದರೆ ಇಲ್ಲೊಬ್ಬ ಮಹಿಳೆ ರಾಜಕುಮಾರ ತನ್ನ ಮಾತನ್ನ ಉಳಿಸಿಕೊಂಡಿಲ್ಲ ಅಂತಾ ನೇರವಾಗಿ ಕೋರ್ಟ್ ಮೆಟ್ಟಿಲನ್ನೇ ಏರಿದ್ದಾಳೆ. ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ನಲ್ಲಿ ಇಂತಹದ್ದೊಂದು ವಿಚಿತ್ರ ಅರ್ಜಿ ಸಲ್ಲಿಕೆಯಾಗಿದೆ.
ಬ್ರಿಟನ್ ಪ್ರಿನ್ಸ್ ಹ್ಯಾರಿ ಮದುವೆಯಾಗೋದಾಗಿ ಕೊಟ್ಟಿದ್ದ ಮಾತನ್ನ ಉಳಿಸಿಕೊಂಡಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಅರ್ಜಿಯನ್ನ ಸಲ್ಲಿಸಿದ್ದಾರೆ. ಪಂಜಾಬ್ ಹೈಕೋರ್ಟ್ ಈ ಅರ್ಜಿಯನ್ನ ವಜಾ ಮಾಡಿದೆ. ಇದೊಂದು ಹಗಲುಗನಸು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಪಲ್ವಿಂದರ್ ಸಿಂಗ್ ಎಂಬ ವಕೀಲೆಯೊಬ್ಬರು ಈ ಅರ್ಜಿಯನ್ನ ಸಲ್ಲಿಸಿದ್ದು ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಿನ್ಸ್ ಹ್ಯಾರಿ ಕಳುಹಿಸಿದ್ದಾರೆ ಎನ್ನಲಾದ ಇಮೇಲ್ಗಳನ್ನ ಕೋರ್ಟ್ಗೆ ಪ್ರಸ್ತುತಪಡಿಸಲಾಗಿದೆ. ಇದರಲ್ಲಿ ಅರ್ಜಿದಾರರಿಗೆ ಹ್ಯಾರಿ ಎಂಬ ಹೆಸರಿನಲ್ಲಿ ಮೇಲ್ಗಳು ಬಂದಿವೆ.
ಈ ಅರ್ಜಿಯನ್ನ ವಜಾಗೊಳಿಸಿದ ಕೋರ್ಟ್, ಈ ಆರೋಪದಲ್ಲಿ ಯಾವುದೇ ತಿರುಳಿಲ್ಲ. ಆದರೆ ಈ ಸುಳ್ಳು ಸಂಭಾಷಣೆಯನ್ನ ಇಷ್ಟೊಂದು ಗಂಭೀರವಾಗಿ ಪರಿಗಣಿಸಿದ ಅರ್ಜಿದಾರೆಯ ಬಗ್ಗೆ ಕನಿಕರ ಮೂಡುತ್ತಿದೆ. ಫೇಸ್ಬುಕ್ ಹಾಗೂ ಟ್ವಿಟರ್ನಂತಹ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಈ ರೀತಿ ಸುಳ್ಳು ಐಡಿಯಾಗಳನ್ನ ಕ್ರಿಯೇಟ್ ಮಾಡೋದು ಇದೇ ಮೊದಲೇನಲ್ಲ. ಬಹುಶಃ ಈ ಪ್ರಿನ್ಸ್ ಹ್ಯಾರಿ ಪಂಜಾಬ್ನ ಯಾವುದೋ ಸೈಬರ್ ಕೆಫೆಯಲ್ಲಿ ಕುಳಿತುಕೊಂಡಿರಬಹುದು ಎಂದು ಹೇಳಿದೆ.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು. ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.