ಕಳ್ಳತನ, ಕೊಲೆ, ಸುಲಿಗೆ, ಅತ್ಯಾಚಾರಗಳಂತಹ ಗಂಭೀರ ಪ್ರಕರಣದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರೋದು ಕಾಮನ್. ಆದರೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಿವಾಸಿಯೊಬ್ಬ ತನ್ನ ಕೋಳಿಗಳು ಮೊಟ್ಟೆ ಇಡುತ್ತಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ..!
ಹೌದು..! ಪೊಲೀಸ್ ಠಾಣೆಗೆ ಭೇಟಿ ನೀಡಿದ ಕುಕ್ಕುಟೋದ್ಯಮಿ ನಿರ್ದಿಷ್ಟ ಕಂಪನಿಯೊಂದರ ಹೆಸರನ್ನ ಪೊಲೀಸರ ಮುಂದೆ ಹೇಳಿ, ಅದೇ ಕಂಪನಿಯ ಫುಡ್ನ್ನು ತನ್ನ ಕೋಳಿಗಳಿಗೆ ನೀಡಿದ ಬಳಿಕ ಅವು ಮೊಟ್ಟೆ ಇಡೋದನ್ನ ನಿಲ್ಲಿಸಿವೆ ಎಂದು ಆರೋಪಿಸಿದ್ದಾನೆ.
ಈ ಭಾಗದ ಮೂರ್ನಾಲ್ಕು ಕೋಳಿ ಸಾಕಾಣಿಕಾ ಕೇಂದ್ರಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಇದಕ್ಕೆ ಸಂಬಂಧಿಸಿ ಪರಿಹಾರವನ್ನ ಪಾವತಿಸಲು ಫುಡ್ ತಯಾರಕ ಕಂಪನಿ ಒಪ್ಪಿದ ಹಿನ್ನೆಲೆ ಪೊಲೀಸರು ಯಾವುದೇ ದೂರನ್ನ ದಾಖಲಿಸಿಕೊಂಡಿಲ್ಲ.
ದೂರುದಾರ ವ್ಯಕ್ತಿಯು ಕೋಳಿ ಫಾರಂ ಒಂದರ ಮಾಲೀಕರಾಗಿದ್ದಾರೆ. ಆತನ ಪ್ರದೇಶದಲ್ಲಿದ್ದ ನಾಲ್ಕಕ್ಕೂ ಹೆಚ್ಚು ಕೋಳಿ ಸಾಕಾಣಿಕಾ ಕೇಂದ್ರಗಳು ಈ ಸಮಸ್ಯೆಯನ್ನ ಎದುರಿಸಿವೆ. ಇದಾದ ಬಳಿಕ ಅವರು ದೂರು ನೀಡಲು ಆಗಮಿಸಿದ್ದರು ಎಂದು ಲೋನಿ ಕಲ್ಬೋರ್ ಠಾಣೆ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ರಾಜೇಂದ್ರ ಮೊಕಾಶಿ ಹೇಳಿದ್ರು.
ಅಹಮದ್ನಗರ ಜಿಲ್ಲೆಯ ಕೋಳಿ ಫುಡ್ ತಯಾರಕ ಕಂಪನಿಯಿಂದ ಕೋಳಿಗಳಿಗೆ ಆಹಾರ ಖರೀದಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಯಾವುದಾದರೂ ಫುಡ್ ಕೋಳಿಗಳ ಆರೋಗ್ಯಕ್ಕೆ ಸೂಕ್ತವೆನಿಸದೇ ಹೋದಲ್ಲಿ ಅವುಗಳು ಮೊಟ್ಟೆ ಹಾಕೋದನ್ನ ನಿಲ್ಲಿಸುತ್ತವೆ. ಹೀಗಾಗಿ ಈ ಹಿಂದೆ ಬಳಕೆ ಮಾಡುತ್ತಿದ್ದ ಹಳೆಯ ಫುಡ್ಗಳನ್ನ ಹಾಕಿದಾಗ ಕೋಳಿಗಳು ಮೊಟ್ಟೆ ಹಾಕಿವೆ ಅನ್ನೋದನ್ನ ಕೋಳಿ ಫಾರಂ ಮಾಲೀಕ ಗಮನಿಸಿದ್ದಾರೆ.
ಇನ್ನು ಈ ವಿಚಾರವನ್ನ ಫುಡ್ ತಯಾರಕ ಕಂಪನಿಗೆ ತಿಳಿಸುತ್ತಿದ್ದಂತೆಯೇ ಕೋಳಿ ಫುಡ್ ವಾಪಸ್ ಪಡೆದ ಅವರು ಪರಿಹಾರವನ್ನೂ ನೀಡೋದಾಗಿ ಪೊಲೀಸರ ಮುಂದೆ ಹೇಳಿದ್ದಾರೆ.