ಪಬ್ ಜೀ ಅಂತಹ ಆನ್ ಲೈನ್ ಆಟಗಳು ಮಕ್ಕಳ ಬದುಕನ್ನೇ ಕಸಿಯುತ್ತಿದ್ದು, ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಒಬ್ಬನ ಜೀವವನ್ನೇ ಬಲಿ ಪಡೆದಿದೆ.
ದ್ವಾರಕಾ ತಿರುಮಲ ಮಂಡಲ ಜುಜ್ಜುಲಕುಂಟ ಎಂಬಲ್ಲಿ 16 ವರ್ಷದ ಬಾಲಕನೊಬ್ಬ ಪಬ್ ಜಿ ಆಟದ ದುಶ್ಚಟ ಬೆಳೆಸಿಕೊಂಡಿದ್ದ.
ಈ ದುರ್ವ್ಯಸನಕ್ಕೆ ಆತ ಎಷ್ಟರ ಮಟ್ಟಿಗೆ ದಾಸನಾಗಿದ್ದ ಎಂದರೆ, ಅದರ ಮೇಲಿನ ವ್ಯಾಮೋಹದಿಂದ ಆಟವಾಡುತ್ತಾ ತನ್ನನ್ನು ತಾನೇ ಮರೆತಿದ್ದ. ಆಡುವುದರಲ್ಲೇ ಕಳೆದೇ ಹೋಗಿದ್ದ.
ಲಾಕ್ ಡೌನ್ ಅವಧಿಯಲ್ಲಿ ಹನಿ ನೀರು ಕುಡಿಯದೆ, ತುತ್ತು ಅನ್ನ ತಿನ್ನದೆ ಪಬ್ ಜಿಯಲ್ಲಿ ಮಗ್ನನಾಗಿದ್ದ ಆತನಿಗೆ ಒಂದೆಡೆ ನಿರ್ಜಲೀಕರಣ, ಇನ್ನೊಂದೆಡೆ ಅತಿಸಾರ ಆಗಿ ಆರೋಗ್ಯದಲ್ಲಿ ಏರುಪೇರಾಗಿದೆ.
ಬುದ್ಧಿವಾದ ಹೇಳಿ ಸುಸ್ತಾಗಿದ್ದ ಮನೆಯವರೆಲ್ಲ ಈತನ ಅವಸ್ಥೆ ಕಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕೊರೊನಾ ಪರೀಕ್ಷೆ ಮಾಡಿದ್ದು, ನೆಗಟೀವ್ ವರದಿ ಬಂದಿದೆ. ಕೊನೆಗೆ ಕೆಲವೇ ಗಂಟೆಯಲ್ಲಿ ಆಸ್ಪತ್ರೆಯಲ್ಲೇ ಪ್ರಾಣ ಬಿಟ್ಟಿದ್ದಾನೆ.
ಈ ಚಟಕ್ಕೆ ಬಲಿಯಾದ ಬಾಲಕ ಈತನೊಬ್ಬನೇ ಅಲ್ಲ. ಸತತ 6 ಗಂಟೆ ಕಾಲ ಪಬ್ ಜಿ ಆಡಿ, ಅದರಲ್ಲೇ ಮುಳುಗಿಹೋಗಿ ಹೃದಯಾಘಾತದಿಂದ ಮಧ್ಯಪ್ರದೇಶದ ಫರ್ಖಾನ್ ಖುರೇಷಿ ಎಂಬ 16 ವರ್ಷದ ಬಾಲಕ ಇತ್ತೀಚೆಗೆ ಮೃತಪಟ್ಟಿದ್ದ.