ಕೊರೊನಾ ಎರಡನೆ ಅಲೆ ದೇಶದಲ್ಲಿ ತಾಂಡವವಾಡೋಕೆ ಶುರುವಾದ ಮೇಲಂತೂ ಸಾವು ನೋವಿನ ಸುದ್ದಿಗಳನ್ನೇ ಹೆಚ್ಚಾಗಿ ಕೇಳುತ್ತಿದ್ದೇವೆ. ಈ ಸಂಕಷ್ಟದ ಸಂದರ್ಭದಲ್ಲಿ ಗೋರಕ್ಪುರದಲ್ಲಿ ನಡೆದ ಘಟನೆಯೊಂದು ಪವಾಡಗಳ ಮೇಲೆ ನಂಬಿಕೆ ಇಡುವಂತೆ ಮಾಡಿದೆ.
ಗೋರಕ್ಪುರದ 82 ವರ್ಷದ ವೃದ್ಧೆ ವಿದ್ಯಾ ಪ್ರೋನಿಂಗ್ ಮೂಲಕ ಕೋವಿಡ್ 19 ನ್ನು ಜಯಿಸಿದ್ದಾರೆ. ಪ್ರೋನಿಂಗ್ ಅನ್ನೋದು ಮಕಾಡೆ ಮಲಗಿ ಆಮ್ಲಜನಕವನ್ನ ಹೆಚ್ಚು ಮಾಡಿಕೊಳ್ಳುವ ಒಂದು ವಿಧಾನವಾಗಿದೆ.
ವಿದ್ಯಾ ದೇವಿ ಕಳೆದ 12 ದಿನಗಳಿಂದ ಡೆಡ್ಲಿ ವೈರಸ್ನ ವಿರುದ್ಧ ಹೋರಾಡುತ್ತಿದ್ದರು. ಆಕೆಯ ಆಮ್ಲಜನಕ ಮಟ್ಟ ಕಡಿಮೆಯಾಗುತ್ತಿರೋದು ಆತಂಕಕ್ಕೆ ದೂಡಿತ್ತು. ಆದರೆ ಕುಟುಂಬಸ್ಥರು ಮಾತ್ರ ನಿರಾಶವಾದವನ್ನ ಹೊಂದಿರಲಿಲ್ಲ. ಈಕೆಯ ಪುತ್ರ ಹರಿ ಮೋಹನ್ ಶ್ರೀವಾತ್ಸವ್ ತಾಯಿ ಜೊತೆಯೇ ಇದ್ದು ಅವರನ್ನ ಕೊರೊನಾದಿಂದ ಹೊರತಂದಿದ್ದಾರೆ.
ತಾಯಿಯ ಸ್ಥಿತಿ ಕಂಡು ಕುಟುಂಬಸ್ಥರು ನೊಂದಿದ್ದರೂ ಸಹ ಯಾರೊಬ್ಬರೂ ವಿಶ್ವಾಸವನ್ನ ಕಳೆದುಕೊಂಡಿರಲಿಲ್ಲ. ವೈದ್ಯರನ್ನ ಸಂಪರ್ಕಿಸಿದ ಬಳಿಕ ಆಕೆಯನ್ನ ಹೊಟ್ಟೆಯಡಿಯಾಗಿ ಮಲಗುವಂತೆ ಹೇಳಲಾಯ್ತು. ಈ ರೀತಿ ಮಾಡಿದ್ದರಿಂದ ವೃದ್ಧೆಯ ಆಕ್ಸಿಜನ್ ಪ್ರಮಾಣ 79 ರಿಂದ 94ಕ್ಕೆ ಏರಿಕೆ ಕಂಡಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ವಿದ್ಯಾ ದೇವಿ ಪುತ್ರ, ಸೊಂಕಿಗೆ ಒಳಗಾದ ನನ್ನ ತಾಯಿಯ ದೇಹದಲ್ಲಿ ಆಮ್ಲಜನಕದ ಪ್ರಮಾಣಕ್ಕೆ 79ಕ್ಕೆ ಇಳಿಕೆಯಾಗಿತ್ತು. ನಾವೆಲ್ಲರೂ ಚಿಂತಿತರಾಗಿದ್ದೆವು. ಇದಾದ ಬಳಿಕ ಪ್ರೋನಿಂಗ್ ಬಗ್ಗೆ ಮಾಹಿತಿ ಪಡೆದವು. ಹಾಗೂ ಇದರ ಸಹಾಯದಿಂದ ನನ್ನ ತಾಯಿಯ ಆಕ್ಸಿಜನ್ ಪ್ರಮಾಣ ಏರಿಕೆಯಾಯ್ತು ಎಂದು ಹೇಳಿದ್ದಾರೆ.
ಸದ್ಯ ವಿದ್ಯಾರ ಆಮ್ಲಜನಕ ಮಟ್ಟ 97 ಆಗಿದೆ. ಈಕೆಯ ಜೊತೆಯಲ್ಲಿ ಸೋಂಕಿಗೆ ಒಳಗಾಗಿದ್ದ ಇತರೆ ಕುಟುಂಬ ಸದಸ್ಯರೂ ಇದೀಗ ಚೇತರಿಸಿಕೊಂಡಿದ್ದಾರೆ. ಪ್ರೋನಿಂಗ್ ಜೊತೆ ಆಹಾರ ಕ್ರಮ, ಧನಾತ್ಮಕ ಚಿಂತನೆ ವಿದ್ಯಾರ ಆರೋಗ್ಯವನ್ನ ಸುಧಾರಿಸಿದೆ.