ಕಾಂಗ್ರೆಸ್ನಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯ ಹಾಗೂ ಕಲಹ ನಿವಾರಣೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇತುವೆಯಾಗಿದ್ದಾರೆ. ಪಕ್ಷದಲ್ಲಿರುವ ಅಂತಃಕಲಹ ನಿವಾರಣೆಗೆ ಹೊಸ ಪ್ಲಾನ್ ಮಾಡಿರುವ ಪ್ರಿಯಾಂಕಾ ಗಾಂಧಿ ಕೊರೊನಾದಿಂದ ಒಂದು ತಿಂಗಳ ಹಿಂದಷ್ಟೇ ನಿಧನರಾದ ಅಹ್ಮದ್ ಪಟೇಲ್ರ ಹಾದಿಯನ್ನ ತುಳಿಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಕಾಂಗ್ರೆಸ್ನಲ್ಲಿ ಉಂಟಾಗಿದ್ದ ಸಾಕಷ್ಟು ಭಿನ್ನಾಭಿಪ್ರಾಯಗಳನ್ನ ಶಮನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆಗಸ್ಟ್ನಲ್ಲಿ ನಡೆದ ಸಿಡಬ್ಲೂಸಿ ಮೀಟಿಂಗ್ ಬಳಿಕ ಕಾಂಗ್ರೆಸ್ನ ಅಂತಃಕಲಹ ಬೆಳಕಿಗೆ ಬಂದಿತ್ತು. ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಇರೋದು ತಿಳಿದಿತ್ತಾದರೂ ಯಾರೂ ಕೂಡ ಈ ವೈಮನಸ್ಸನ್ನ ಸರಿ ಮಾಡುವತ್ತ ಮುಂದಡಿ ಇಟ್ಟಿರಲಿಲ್ಲ. ಆದರೆ ಇದೀಗ ಪ್ರಿಯಾಂಕ ಬಿಕ್ಕಟ್ಟು ಪರಿಹಾರಕ್ಕೆ ಹೆಜ್ಜೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಿಯಾಂಕ ಗಾಂಧಿ ಕಳೆದ ತಿಂಗಳು ಜಿ – 23 ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸಿ ಅಂತರ ನಿವಾರಣೆಗೆ ಪ್ರಯತ್ನ ಮಾಡಿದ್ದಾರೆ ಎಂದು ವರದಿಯಾಗಿದೆ. ಸಿಡಬ್ಲೂಸಿ ಸಭೆಯಲ್ಲಿ ಅಹ್ಮದ್ ಪಟೇಲ್ರಿಗೆ ಶ್ರದ್ದಾಂಜಲಿ ಸಲ್ಲಿಸುವುದರ ಜೊತೆಗೆ ಹಳೆಯ ಭಿನ್ನಾಭಿಪ್ರಾಯಗಳನ್ನ ಮರೆಯುವಂತೆ ಮನವಿ ಮಾಡಿದ್ದಾರೆ.
ಪ್ರಿಯಾಂಕಾ ಗಾಂಧಿ ಪ್ರಯತ್ನದ ಫಲವಾಗಿ ಶನಿವಾರ ಕಾಂಗ್ರೆಸ್ ನಾಯಕರು ಸಭೆಗೆ ಹಾಜರಾಗಿದ್ದಾರೆ. ಈ ಸಭೆಯಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಭಾಗಿಯಾಗಿದ್ರು. ಸಭೆಯಲ್ಲಿ ಪಕ್ಷದ ಸಮತೋಲವನ್ನ ಮರಳಿ ತರುವಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.