ನಾಗರಿಕ ಸಮಾಜಕ್ಕೆ ನೋವುಂಟು ಮಾಡುವ ಸನ್ನಿವೇಶವೊಂದರಲ್ಲಿ, ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಛತ್ತೀಸ್‌ಘಡದ ನದಿಯೊಂದನ್ನು ದಾಟಿಸಲು ದೊಡ್ಡದೊಂದು ಪಾತ್ರೆ ಬಳಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಇಲ್ಲಿನ ಬಿಜಾಪುರ ಜಿಲ್ಲೆಯ ಗೊರ್ಲಾ ಎಂಬಲ್ಲಿ ಕಳೆದ ವಾರದಂದು, ಲಕ್ಷ್ಮೀ ಯಾಲಮ್ ಹೆಸರಿನ ಗರ್ಭಿಣಿ ಮಹಿಳೆಯನ್ನು ತುಂಬಿ ಹರಿಯುತ್ತಿರುವ ಚಿಂತಾವಾಗು ನದಿಯನ್ನು ದಾಟಿಸಲು ಅವರ ಕುಟುಂಬಸ್ಥರು ಮುಂದಾಗಿದ್ದಾರೆ. ಈ ನದಿ ದಾಟಲು ಸೇತುವೆ ಇಲ್ಲದೇ ಇರುವುದೇ ದೊಡ್ಡ ಸಮಸ್ಯೆಯಾಗಿದೆ.
ಇಷ್ಟು ಸಾಲದೆಂಬಂತೆ, ಪ್ರಯಾಸದಿಂದ ಆಕೆಯನ್ನು 15 ಕಿಮೀಗಳ ವರೆಗೂ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಬಂದರೆ ಅಲ್ಲಿ ವೈದ್ಯರೇ ಇಲ್ಲ…! ಪ್ರಸವ ವೇದನೆ ಅನುಭವಿಸುತ್ತಿರುವ ಆಕೆಯನ್ನು ಅಟೆಂಡ್ ಮಾಡಬೇಕಾದ ವೈದ್ಯರು ಹಾಗೂ ನರ್ಸ್‌ಗಳು, ಇದು ತಮ್ಮ ಡ್ಯೂಟಿ ವೇಳೆಯಲ್ಲ ಎಂದು ಸಬೂಬು ಹೇಳಿಕೊಂಡು ಕಾಲ ಹರಣ ಮಾಡಿದ್ದಾರೆ. ಇದೇ ಅವಧಿಯಲ್ಲಿ ಲಕ್ಷ್ಮೀಗೆ ನೈಸರ್ಗಿಕವಾಗಿ ಹೆರಿಗೆಯಾಗಿದೆ.
ಪ್ರಕರಣದ ಸಂಬಂಧ, ಇಲ್ಲಿನ ಭೋಪಾಲಪಟ್ಟಣಂ ತಾಲ್ಲೂಕು ಆರೋಗ್ಯಾಧಿಕಾರಿ ಅಜಯ್ ರಾಮ್ಟೆಕೆ ಅವರಿಗೆ ದೂರು ನೀಡಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.