ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ . ದೇಶದ ಭೂಭಾಗವನ್ನ ಕಾಪಾಡೋದು ಪ್ರಧಾನಿಯ ಜವಾಬ್ದಾರಿ. ಆದರೆ ಪ್ರಧಾನಿ ಮೋದಿ ದೇಶದ ಭೂಮಿಯನ್ನ ಚೀನಾಗೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಚೀನಾದ ಮುಂದೆ ನಿಲ್ಲಲಾಗದ ಒಬ್ಬ ಹೇಡಿ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.
ಗುರುವಾರ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್, ಚೀನಾ ಹಾಗೂ ಭಾರತದ ಮಿಲಿಟರಿ ಒಪ್ಪಂದದ ಬಗ್ಗೆ ವಿಸ್ತೃತ ವಿವರಣೆ ನೀಡಿದ್ದರು. ಈ ಒಪ್ಪಂದದ ವಿರುದ್ಧ ಕಿಡಿಕಾರಿರುವ ರಾಹುಲ್ ಗಾಂಧಿ ಇದರಿಂದ ಭಾರತೀಯರಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪೂರ್ವ ಲಡಾಖ್ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಮ್ಮ ಸೈನ್ಯವನ್ನ ಈಗ ಫಿಂಗರ್ ಪಾಯಿಂಂಟ್ ಮೂರರಲ್ಲಿ ಇರಿಸಲಾಗಿದೆ. ಫಿಂಗರ್ ಪಾಯಿಂಟ್ ನಾಲ್ಕು ಕೂಡ ಭಾರತಕ್ಕೇ ಸೇರಿದ ಪ್ರದೇಶವಾಗಿದೆ. ಆದರೆ ಫಿಂಗರ್ 4ರಿಂದ ಫಿಂಗರ್3ಕ್ಕೆ ಭಾರತೀಯ ಸೈನ್ಯವನ್ನ ಕರೆಯಿಸಿಕೊಳ್ಳುವ ಮೂಲಕ ನಮ್ಮ ದೇಶದ ಪ್ರದೇಶವನ್ನ ಚೀನಾಗೆ ಪ್ರಧಾನಿ ಮೋದಿ ಬಿಟ್ಟುಕೊಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.