ಮತಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಿಂತ ನೋಟಾಗೆ ಹಾಕಲಾದ ಮತವೇ ಹೆಚ್ಚಿದ್ದರೆ ಅಂತಹ ಮತಕ್ಷೇತ್ರಗಳಲ್ಲಿ ಫಲಿತಾಂಶವನ್ನ ರದ್ದು ಮಾಡಿ ಆ ಅಭ್ಯರ್ಥಿಗಳಿಗೆ ಚುನಾವಣೆಯನ್ನ ನಿರ್ಬಂಧಿಸಿ ಹೊಸ ಚುನಾವಣೆಯನ್ನ ನಡೆಸಬೇಕು ಎಂಬ ಪಿಐಎಲ್ ಸಂಬಂಧ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್, ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಮುಖ್ಯ ನಾಯಮೂರ್ತಿ ಎಸ್.ಎ. ಬೋಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ನೇತೃತ್ವದ ನ್ಯಾಯಪೀಠ ಕಾನೂನು ಸಚಿವಾಲಯ ಹಾಗೂ ಚುನಾವಣಾ ಆಯೋಗಕ್ಕೆ ಪಿಐಎಲ್ ಸಂಬಂಧ ಉತ್ತರ ನೀಡುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದೆ.
ಆದರೆ ಈ ಪಿಐಎಲ್ ಸಂಬಂಧ ಕಳವಳ ವ್ಯಕ್ತಪಡಿಸಿದ ಬೋಬ್ಡೆ ನೇತೃತ್ವದ ನ್ಯಾಯಪೀಠ, ಒಂದು ವೇಳೆ ಫಲಿತಾಂಶವನ್ನೇ ರದ್ದು ಮಾಡಿ ಅಭ್ಯರ್ಥಿಗೆ ಮರು ಸ್ಪರ್ಧೆಗೆ ಅವಕಾಶವನ್ನೇ ನೀಡದೇ ಇದ್ದಲ್ಲಿ ಸಂಸತ್ನಲ್ಲಿ ಆ ಕ್ಷೇತ್ರದ ಅಸ್ತಿತ್ವವೇ ಇರೋದಿಲ್ಲ ಅಲ್ಲವೇ ಎಂದು ಕೇಳಿದೆ.
ಅರ್ಜಿದಾರರ ಪರ ಹಾಜರಾಗಿದ್ದ ವಕೀಲೆ ಮೇನಕಾ ಗುರುಸ್ವಾಮಿ, ನೋಟಾಗೆ ಅಧಿಕ ಮತ ನೀಡಿದ್ದಾರೆ ಎಂದರೆ ಅದರರ್ಥ ಜನತೆ ಅಭ್ಯರ್ಥಿಗಳನ್ನ ತಿರಸ್ಕರಿಸಿದ್ದಾರೆ ಎಂದರ್ಥ. ಈ ಮೂಲಕ ರಾಜಕೀಯ ಪಕ್ಷಗಳು ಉತ್ತಮ ಅಭ್ಯರ್ಥಿಗಳನ್ನ ಹುಡುಕಲು ಸಹಾಯವಾಗುತ್ತೆ ಎಂದು ಕೋರ್ಟ್ಗೆ ತಿಳಿಸಿದ್ದಾರೆ.