ಜೀವನಾಂಶದ ವಿಚಾರವಾಗಿ ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ತೀರ್ಪನ್ನ ಪ್ರಕಟಿಸಿದೆ. ಯಾವುದೇ ವ್ಯಕ್ತಿಯ ಸಂಪಾದನೆಯ ಮೇಲೆ ಕೇವಲ ಆತನ ಪತ್ನಿ ಹಾಗೂ ಮಕ್ಕಳ ಹಕ್ಕು ಮಾತ್ರ ಇರೋದಿಲ್ಲ. ಬದಲಾಗಿ ವೃದ್ಧ ತಂದೆ – ತಾಯಿ ಕೂಡ ಈ ಸಂಪಾದನೆಯ ಹಕ್ಕುದಾರರಾಗಿದ್ದಾರೆ. ಪತ್ನಿ ಹಾಗೂ ಮಗನಂತೆಯೇ ವ್ಯಕ್ತಿಯ ತಂದೆ – ತಾಯಿ ಕೂಡ ಆತನ ಸಂಪಾದನೆಯ ಸಮಾನ ಪಾಲುದಾರರು ಎಂದು ಹೇಳುವ ಮೂಲಕ ಮಹತ್ವದ ತೀರ್ಪನ್ನ ಹೊರಡಿಸಿದೆ.
ತೀಸ್ ಹಜಾರಿ ಪ್ರಧಾನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಗಿರೀಶ್ ಕಠ್ಪಾಲಿಯಾ ಈ ತೀರ್ಪನ್ನ ಪ್ರಕಟಿಸಿದ್ದಾರೆ. ಮಹಿಳೆಯೊಬ್ಬರು ತನ್ನ ಪತಿ ಪ್ರತಿ ತಿಂಗಳು 50 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಆದರೆ ಅವರ ಮಕ್ಕಳಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಜೀವನಾಂಶವನ್ನ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಮಹಿಳೆಯ ವಾದದ ಪ್ರತಿಯಾಗಿ ಕೋರ್ಟ್ ಮುಂದೆ ವಾದ ಮಂಡಿಸಿದ ಪತಿ ಪರ ವಕೀಲ ಪತಿಯ ತಿಂಗಳ ಆದಾಯ 37 ಸಾವಿರ ರೂಪಾಯಿ ಇದೆ. ಈ ಹಣದಲ್ಲಿ ಪತ್ನಿ, 2 ವರ್ಷದ ಮಗುವಿನ ಜೊತೆಯಲ್ಲಿ ತನ್ನ ಹಾಗೂ ತನ್ನ ವೃದ್ಧ ಪೋಷಕರ ಖರ್ಚನ್ನೂ ನನ್ನ ಕಕ್ಷಿದಾರರು ಭರಿಸಬೇಕಿದೆ ಎಂದು ಕೋರ್ಟ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇದಾದ ಬಳಿಕ ಕೋರ್ಟ್ ಪತಿಯ ಆದಾಯವನ್ನ ಪರಿಶೀಲನೆ ನಡೆಸಿದೆ. ಇದರನ್ವಯ ಅವರ ತಿಂಗಳ ಸಂಬಳ 37 ಸಾವಿರ ರೂಪಾಯಿ ಇದೆ ಅನ್ನೋದು ಖಚಿತವಾಗಿದೆ. ಪತಿ, ತಂದೆ – ತಾಯಿಯ ಚಿಕಿತ್ಸೆಗೂ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ ಎಂಬ ಅಂಶ ಕೋರ್ಟ್ಗೆ ತಿಳಿದು ಬಂದಿದೆ. ಆದರೆ ಪತಿಯ ಸಂಬಳದ ಮೇಲೆ ಪತ್ನಿ ಹಾಗೂ ಮಗುವಿಗೆ ಮೊದಲ ಆದ್ಯತೆ ಕೊಡಬೇಕು ಅನ್ನೋದು ಪತ್ನಿ ಪರ ವಕೀಲರ ವಾದವಾಗಿತ್ತು.
ವಾದ – ವಿವಾದಗಳನ್ನ ಆಲಿಸಿದ ಕೋರ್ಟ್, ಪತಿಯ ಸಂಬಳವನ್ನ 6 ಭಾಗಗಳಾಗಿ ವಿಂಗಡಿಸಿದೆ. ಇದರಲ್ಲಿ 2 ಭಾಗ ಪತಿಗೆ, ಉಳಿದ ನಾಲ್ಕು ಭಾಗವನ್ನ ಪತ್ನಿ, ಮಗು ಹಾಗೂ ತಂದೆ – ತಾಯಿಗೆ ನೀಡಿದೆ. ಇದರಲ್ಲಿ ಪತ್ನಿ ಹಾಗೂ ಮಗು ಇಬ್ಬರಿಗೂ ಸೇರಿ 12 ಸಾವಿರದ ಐದು ನೂರು ರೂಪಾಯಿ ಹಣವನ್ನ ಪ್ರತಿ ತಿಂಗಳ 10ನೇ ತಾರೀಖಿನ ಒಳಗಾಗಿ ನೀಡಬೇಕು ಎಂದು ಕೋರ್ಟ್ ಹೇಳಿದೆ.
ಕೇಕ್ ಉದಾಹರಣೆಯನ್ನ ನೀಡಿ ತೀರ್ಪನ್ನ ಪ್ರಕಟಿಸಿದ ನ್ಯಾಯಾಧೀಶರು, ಪತಿಯ ಆದಾಯ ಕೇಕ್ನಂತೆ ಇರುತ್ತೆ. ಅದನ್ನ ಸಮಪಾಲು ಮಾಡಿಕೊಂಡು ತಿನ್ನಬೇಕು ಎಂದು ಹೇಳಿದ್ದಾರೆ.