ಯಾರಾದರೂ ಕಳೆದು ಹೋದರೆ ಆ ಸಂಬಂಧ ಪೊಲೀಸ್ ಠಾಣೆಗಳಲ್ಲಿ ದೂರನ್ನ ದಾಖಲು ಮಾಡಲಾಗುತ್ತದೆ. ಇದೇ ರೀತಿ ಆಲಿಘರ್ನಲ್ಲೂ ಪೊಲೀಸರು ವಿಚಿತ್ರ ನಾಪತ್ತೆ ಕೇಸ್ ಒಂದನ್ನ ದಾಖಲು ಮಾಡಿಕೊಂಡಿದ್ದಾರೆ.
ವಿದೇಶಕ್ಕೆ ಹಾರಲು ಸಿದ್ಧವಾಗಿದ್ದ ಬೂದು ಮೈಬಣ್ಣ ಹಾಗೂ ಕೆಂಪು ಪುಕ್ಕದ ಗಿಳಿ ಮಾರ್ಚ್ 2ರಿಂದ ನಾಪತ್ತೆಯಾಗಿದೆ ಎಂದು ದೂರನ್ನ ದಾಖಲಿಸಲಾಗಿದೆ.
ಕ್ವಾರ್ಸಿ ಪೊಲೀಸ್ ಠಾಣೆಯಲ್ಲಿ ಈ ರೀತಿಯ ದೂರನ್ನ ದಾಖಲಿಸಿಕೊಂಡಿರುವ ಬಗ್ಗೆ ಸರ್ಕಲ್ ಆಫೀಸರ್ ಅನಿಲ್ ಸಮಾನಿಯಾ ಎಂಬವರು ಅಧಿಕೃತ ಮಾಹಿತಿ ನೀಡಿದ್ದಾರೆ. ದೂರಿನ ಜೊತೆಯಲ್ಲಿ ಗಿಳಿಯ ಫೋಟೋ ಹಾಗೂ ಅದರ ಚಾಕ ಚಾಕ್ಯತೆಗಳ ಬಗ್ಗೆಯೂ ಮಾಲೀಕ ವಿಸ್ತೃತ ವರದಿ ನೀಡಿದ್ದಾರೆ.
ಈ ಪಕ್ಷಿ ಇಂಗ್ಲೀಷ್ನಲ್ಲಿ ಮಾತನಾಡಬಲ್ಲದು, ಹೆಸರನ್ನ ಹೇಳಬಲ್ಲದು ಹಾಗೂ ವಿಶಲ್ ಊದಬಲ್ಲದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಾಪತ್ತೆಯಾದ ಗಿಳಿಯು ಕೊನೆಯ ಬಾರಿಗೆ ರಮೇಶ್ ವಿಹಾರ ರಾಮಘಾಟ್ ರಸ್ತೆಯಲ್ಲಿ ಕಾಣಿಸಿಕೊಂಡಿತ್ತು.
ಮಿಠು ಎಂದು ಕರೆದರೆ ಈ ಗಿಳಿ ಪ್ರತಿಕ್ರಿಯಿಸುತ್ತೆ ಎಂದು ಮೂಳೆ ತಜ್ಞ ಡಾ. ಎಸ್.ಸಿ ವರ್ಶ್ನೆ ಹೇಳಿದ್ದಾರೆ. ಲಂಡನ್ನಲ್ಲಿ ನೆಲೆಸಿರುವ ವರ್ಶ್ನೆ ಪುತ್ರಿ ಸೌಮ್ಯ ಹಾಗೂ ಅವರ ಪತಿ ರಜತ್ ಈ ಗಿಳಿಯನ್ನ ತಂದಿದ್ದರು.
ಸೌಮ್ಯ ಪಕ್ಷಿಪ್ರಿಯೆ. ಈಕೆ ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ನೆಲೆಸಿದ್ದ ವೇಳೆ ಈ ಆಫ್ರಿಕನ್ ಗಿಳಿಯನ್ನ ತಂದಿದ್ದಳು ಎಂದು ವರ್ಶ್ನೆ ಹೇಳಿದ್ದಾರೆ.
ಸೌಮ್ಯ ಹಾಗೂ ರಜತ್ ಲಂಡನ್ಗೆ ತೆರಳುವ ವೇಳೆ ಮೀಠುವನ್ನ ವರ್ಶ್ನೆ ಬಳಿ ಬಿಡಲಾಗಿತ್ತು. ಸೌಮ್ಯ, ಗಿಳಿಯನ್ನ ಲಂಡನ್ಗೆ ಕೊಂಡೊಯ್ಯಲು ಬೇಕಾದ ಎಲ್ಲಾ ದಾಖಲೆಗಳನ್ನ ಸಿದ್ಧಪಡಿಸುತ್ತಿದ್ದ ವೇಳೆಯಲ್ಲಿ ಗಿಳಿ ನಾಪತ್ತೆಯಾಗಿದೆ.
ಈ ಸುದ್ದಿ ಕೇಳಿದ ಸೌಮ್ಯ ಊಟ ತಿಂಡಿ ಬಿಟ್ಟು ಖಿನ್ನತೆಗೆ ಒಳಗಾಗಿದ್ದಾರಂತೆ. ಪಕ್ಷಿ ಪ್ರಿಯೆಯಾಗಿದ್ದ ಸೌಮ್ಯ, ಗಿಳಿಯನ್ನ ಪಂಜರದಲ್ಲಿ ಇಡುತ್ತಿರಲಿಲ್ಲ. ಹೀಗಾಗಿ ಮೀಠು ಮನೆಯ ಸುತ್ತ ಹಾರಾಡುತ್ತಾ ಜೀವನ ಮಾಡುತ್ತಿತ್ತು. ಗಿಳಿಯನ್ನ ಹುಡುಕಿಕೊಟ್ಟವರಿಗೆ ಅಥವಾ ಗಿಳಿಯ ಬಗ್ಗೆ ನಿಖರ ಮಾಹಿತಿ ನೀಡಿದವರಿಗೆ 5 ಸಾವಿರ ರೂಪಾಯಿ ಬಹುಮಾನವನ್ನೂ ಘೋಷಿಸಲಾಗಿದೆ.