28 ವರ್ಷ ವಯಸ್ಸಿನ ಸಂಬಂಧಿಕನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಹಲವಾರು ತಿಂಗಳಿನಿಂದ ಅತ್ಯಾಚಾರವೆಸಗಿದ ಅಮಾನುಷ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಬಾಲಕಿ ಆರು ತಿಂಗಳ ಗರ್ಭಿಣಿಯಾಗಿದ್ದು ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸಂತ್ರಸ್ತೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಸಂಬಂಧ ತನಿಖೆ ಕೈಗೆತ್ತಿಕ್ಕೊಂಡ ಪೊಲೀಸರು ಆರೋಪಿ ಪೂರಿಯಾ ದೆಹುರಿ ಎಂಬಾತನನ್ನ ಬಂಧಿಸಿದ್ದಾರೆ.
16 ವರ್ಷದ ಸಂತ್ರಸ್ತೆ ಹಾಗೂ ದೆಹುರಿ ಇಬ್ಬರೂ ಸಂಬಂಧಿಕರು. ಜಾಜ್ಪುರ ಜಿಲ್ಲೆಯ ಬಲಿಚಂದ್ರಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಇವರಿಬ್ಬರ ಮನೆ ಇತ್ತು. ಕಳೆದ ಆರು ತಿಂಗಳಿನಿಂದ ದೆಹುರಿ ಅಪ್ರಾಪ್ತೆಯನ್ನ ಹಲವಾರು ಬಾರಿ ಅತ್ಯಾಚಾರ ಮಾಡಿದ್ದಾನೆ. ನಿರಂತರ ಅತ್ಯಾಚಾರದಿಂದಾಗಿ ಅಪ್ರಾಪ್ತೆ ಗರ್ಭಿಣಿಯಾಗಿದ್ದಾಳೆ. ತಾನು ಗರ್ಭಿಣಿಯಾದ ವಿಚಾರವನ್ನ ಸಂತ್ರಸ್ತೆ ದೆಹುರಿಗೆ ಹೇಳಿದ್ದಾಳೆ. ಆದರೆ ಆತ ಬೆದರಿಕೆವೊಡ್ಡಿದ ಕಾರಣ ಸಂತ್ರಸ್ತೆ ತಾಯಿಯಿಂದ ಈ ವಿಚಾರವನ್ನ ಮುಚ್ಚಿಟ್ಟಿದ್ದಳು.
ಮಗಳ ದೇಹದಲ್ಲಾದ ಬದಲಾವಣೆಗಳನ್ನ ಗಮನಿಸಿದ ತಾಯಿ ಆಕೆಯನ್ನ ಪ್ರಶ್ನೆ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಈ ಬಳಿಕ ತಾಯಿ ದೂರನ್ನ ದಾಖಲಿಸಿದ್ದಾಳೆ.