ಮಧ್ಯ ಪ್ರದೇಶದ ಚಂಬಲ್ ಪ್ರಾಂತ್ಯದಲ್ಲಿ ಒಂದು ಕಾಲದಲ್ಲಿ ನಡುಕ ಹುಟ್ಟಿಸಿದ್ದ ಡಕಾಯಿತರು ಹಾಗೂ ಅವರನ್ನ ಭೇದಿಸಲು ಪೊಲೀಸರು ಪಟ್ಟ ಸಾಹಸವನ್ನ ಭಿಂದ್ ಜಿಲ್ಲೆಯ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಕಾಯಿತೆ ಹಾಗೂ ಮಾಜಿ ಸಂಸದೆ ಫೂಲನ್ ದೇವಿ, ಡಕಾಯಿತ ಮಲ್ಖಾನ್ ಸಿಂಗ್, ಡಕಾಯಿತನಾಗಿ ಪರಿವರ್ತಿತನಾದ ಕ್ರೀಡಾಪಟು ಪಾನ್ ಸಿಂಗ್ ತೋಮರ್ ಅವರ ಕತೆಗಳನ್ನ ಈ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ.
ಈ ವಸ್ತು ಸಂಗ್ರಹಾಲಯ ಸ್ಥಾಪನೆ ಮಾಡಲು ಮಧ್ಯ ಪ್ರದೇಶದ ಪೊಲೀಸರು ಆರ್ಥಿಕ ನೆರವನ್ನ ನೀಡುತ್ತಿದ್ದಾರೆ. ಮುಂದಿನ ತಿಂಗಳು ಈ ವಸ್ತು ಸಂಗ್ರಹಾಲಯ ಲೋಕಾರ್ಪಣೆಯಾಗಲಿದೆ ಎಂದು ಭಿಂದ್ ಸೂಪರಿಟೆಂಡೆಂಟ್ ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ.
ಡಕಾಯಿತರ ವಿರುದ್ಧ ಹೋರಾಡಿ ಸಾಧನೆ ಮಾಡಿದ ಪೊಲೀಸರ ಕತೆಗಳು ಇನ್ನೂ ಎಲೆಮರೆಯ ಕಾಯಿಯಂತೆಯೇ ಇದೆ. ಹೀಗಾಗಿ ಇಂತವರ ಕತೆಗಳನ್ನ ಮುನ್ನೆಲೆಗೆ ತರಲು ಈ ಪ್ರಯತ್ನ ಮಾಡಲಾಗಿದೆ.