ಮುಂಬೈ: ಕೊರೊನಾ ರೋಗದಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವ ಸಲುವಾಗಿ ಉದ್ಯಮಿಯೊಬ್ಬರು ತಮ್ಮ ಕಾರು ಮಾರಾಟ ಮಾಡಿ ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಿದ್ದಾರೆ.
ಮುಂಬೈ ನಿವಾಸಿ 31 ವರ್ಷದ ಶಹನವಾಜ್ ಶೇಖ್ ತಾವು 2011 ರಲ್ಲಿ ಖರೀದಿಸಿದ್ದ, ನೆಚ್ಚಿನ ಫೋರ್ಡ್ ಎಸ್‌ಯುವಿ ಕಾರನ್ನು ಮಾರಾಟ ಮಾಡಿದ್ದಾರೆ. ಅದರಿಂದ 50 ಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್‌ನ್ನು ಖರೀದಿಸಿದ್ದಾರೆ. ಇದುವರೆಗೆ ಕರೊನಾ ರೋಗದಿಂದ ಬಳಲುತ್ತಿರುವ ಸುಮಾರು 250 ಕುಟುಂಬಗಳಿಗೆ ಈ ಸಿಲಿಂಡರ್ ವಿತರಿಸಿದ್ದಾರೆ.
ಮೇ 28 ರಂದು ಶಹನವಾಜ್ ಅವರ ಉದ್ಯಮ ಸಹಭಾಗಿಯ ಸಹೋದರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತು. ಆಕೆ 6 ತಿಂಗಳ ಗರ್ಭಿಣಿಯಾಗಿದ್ದಳು. ಆದರೆ, ಮುಂಬೈನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದುದರಿಂದ ಆಕೆಗೆ ಎಲ್ಲೂ ಹಾಸಿಗೆ ಹಾಗೂ ವೆಂಟಿಲೇಶನ್ ವ್ಯವಸ್ಥೆ ಸಿಗಲಿಲ್ಲ. ಐದು ಬೇರೆ ಬೇರೆ ಆಸ್ಪತ್ರೆಗೆ ಸಾಗಿಸಿದ ನಂತರ ಆರನೇ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಆಕೆ ಆಟೋರಿಕ್ಷಾದಲ್ಲಿ ಕೊನೆಯುಸಿರೆಳೆದಳು. ಸೂಕ್ತ ಸಮಯದಲ್ಲಿ ಆಮ್ಲಜನಕ ವ್ಯವಸ್ಥೆ ಅಂದರೆ, ವೆಂಟಿಲೇಶನ್ ಸೌಲಭ್ಯ ಸಿಕ್ಕಿದ್ದರೆ ಆಕೆ ಬದುಕುತ್ತಿದ್ದಳು ಎಂಬುದು ಮನೆಯವರ ಅಭಿಪ್ರಾಯ.
ಈ ದಾರುಣ ಘಟನೆಯಿಂದ ಶಹನವಾಜ್ ಅವರ ಮನ ಕಲಕಿತ್ತು. ತಮ್ಮ ಸ್ನೇಹಿತನ ಸಹೋದರಿಯಂತೆ ಇನ್ಯಾರೂ ದಾರುಣವಾಗಿ ಸಾವನ್ನಪ್ಪಬಾರದು ಎಂದು ನಿರ್ಧರಿಸಿದರು. ಅದಕ್ಕಾಗಿ ಕಸ್ಟಮೈಸ್ ಮ್ಯೂಸಿಕ್ ವ್ಯವಸ್ಥೆ ಹಾಗೂ ಎಲ್ಲ ರೀತಿಯ ಹೈ ಎಂಡ್ ಐಶಾರಾಮಿ ವ್ಯವಸ್ಥೆಗಳಿರುವ ಕಾರನ್ನು ಮಾರಾಟ ಮಾಡಿ ಸಿಲಿಂಡರ್ ಗಳನ್ನು ತಂದಿದ್ದು, ಅಗತ್ಯ ಇದ್ದವರು ಪಡೆಯುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.