ಕಾಡಿನಲ್ಲಿ ಬೇಟೆಯಾಡುತ್ತಿದ್ದ ವೇಳೆ ಯುವಕನೊಬ್ಬ ಗುಂಡೇಟಿಗೆ ಬಲಿಯಾದರೆ ಉಳಿದ ಮೂವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ದಾರುಣ ಘಟನೆ ಉತ್ತರಾಖಂಡ್ನ ತೆಹ್ರಿ ಜಿಲ್ಲೆಯ ಕುಂದಿ ಗ್ರಾಮದಲ್ಲಿ ನಡೆದಿದೆ.
ಬೇಟೆಯಾಡುತ್ತಿದ್ದ ವೇಳೆ ಅಕಸ್ಮಾತ್ ಆಗಿ ಗುಂಡು ತಾಕಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಇದರಿಂದ ಪಶ್ಚಾತಾಪಪಟ್ಟ ಉಳಿದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್ಡಿಎಂ ಪಿಆರ್ ಚೌಹಾಣ್ ಹೇಳಿದ್ದಾರೆ.
ಭಿಲಂಗಣಾ ಬ್ಲಾಕ್ನಿಂದ 7 ಮಂದಿ ಸ್ನೇಹಿತರು ಶನಿವಾರ ಬೇಟೆಯಾಡಲು ಕಾಡಿಗೆ ತೆರಳಿದ್ದರು ಎನ್ನಲಾಗಿದೆ. ಇದರಲ್ಲಿ ಬಂದೂಕನ್ನ ಹೊಂದಿದ್ದ 22 ವರ್ಷದ ರಾಜೀವ್ ಈ ತಂಡದ ನೇತೃತ್ವವನ್ನ ವಹಿಸಿದ್ದ. ಈತ ಕಾಲು ಜಾರಿ ನೆಲಕ್ಕೆ ಬಿದ್ದಿದ್ದು ಈ ವೇಳೆ ಅರಿವಿಲ್ಲದೇ ಈತ ಬಂದೂಕಿನ್ ಟ್ರಿಗರ್ನ್ನು ಒತ್ತಿದ್ದಾನೆ.
ಈ ವೇಳೆ ಬಂದೂಕಿನಲ್ಲಿದ್ದ ಗುಂಡು ಸಂತೋಷ್ ಎಂಬಾತನನ್ನ ಸೀಳಿದೆ. ರಕ್ತದ ಮಡುವಿನಲ್ಲಿ ಸಂತೋಷ್ ಬಿದ್ದಿದ್ದನ್ನ ಕಂಡು ಆತನ ಸ್ನೇಹಿತರು ಭಯಗೊಂಡಿದ್ದಾರೆ.
ರಾಜೀವ್ ಬಂದೂಕಿನ ಸಮೇತ ನಾಪತ್ತೆಯಾಗಿದ್ದರೆ, ಸೋಬನ್, ಪಂಕಜ್ ಹಾಗೂ ಅರ್ಜುನ್ ಎಂಬವರು ಈ ಘಟನೆಯಿಂದ ಮನನೊಂದು ಕೀಟನಾಶಕ ಸೇವಿಸಿದ್ದಾರೆ. ಇದೇ ಬಳಗದಲ್ಲಿದ್ದ ರಾಹುಲ್ ಹಾಗೂ ಸುಮಿತ್ ಹಳ್ಳಿಗೆ ವಾಪಸ್ಸಾಗಿದ್ದು ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.
ಕೂಡಲೇ ಗ್ರಾಮಸ್ಥರು ಕೀಟನಾಶಕ ಸೇವಿಸಿದ್ದ ಮೂವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಹೊತ್ತಿಗಾಗಲೇ ಪಂಕಜ್ ಹಾಗೂ ಅರ್ಜುನ್ ಸಾವನ್ನಪ್ಪಿದ್ದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಬನ್ ಕೂಡ ಮೃತಪಟ್ಟಿದ್ದಾನೆ. ಈ ಎಲ್ಲಾ ಯುವಕರು 18 ರಿಂದ 22 ವರ್ಷ ಪ್ರಾಯದವರಾಗಿದ್ದರು.