alex Certify ಸಾಲ ಮರುಪಾವತಿ ತಪ್ಪಿಸಿಕೊಳ್ಳಲು ಸತ್ತಿರುವ ಸನ್ನಿವೇಶ ಸೃಷ್ಟಿಸಿದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲ ಮರುಪಾವತಿ ತಪ್ಪಿಸಿಕೊಳ್ಳಲು ಸತ್ತಿರುವ ಸನ್ನಿವೇಶ ಸೃಷ್ಟಿಸಿದ ಪಾಪಿ

ಭಾರೀ ನಿಗೂಢವಾದ ಹತ್ಯೆ ಪ್ರಕರಣವೊಂದನ್ನು ಬೇಧಿಸಿರುವ ಪುಣೆಯ ಪಿಂಪ್ರಿ-ಚಿಂಚ್ವಾಡ ಪೊಲೀಸರು, ಸಾಲ ಮರುಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಲು ತನ್ನ ಸಾವಿನ ಸುಳ್ಳು ಸುದ್ದಿ ಹಬ್ಬಿಸಿ, ಸ್ನೇಹಿತನನ್ನು ಕೊಂದ ವ್ಯಕ್ತಿಯೊಬ್ಬನ ಸಂಚನ್ನು ಬಯಲಿಗೆ ಎಳೆದಿದ್ದಾರೆ.

ಇಲ್ಲಿನ ದರ್ಗಾ ಒಂದರ ಬಳಿ ಸಿಕ್ಕ ಕೊಳೆತ ಶವವೊಂದರ ಬೆನ್ನತ್ತಿ ತನಿಖೆ ನಡೆಸಿದ ಪೊಲೀಸರು, ಆ ಜಾಗದಿಂದ ಎರಡು ಮೊಬೈಲ್ ಸಂಖ್ಯೆಗಳಿದ್ದ ಚೀಟಿ ಹಾಗೂ ಅರ್ಧ ಸುಟ್ಟ ಬಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಾವು ಚೂರಿ ಇರಿತದಿಂದ ಆಗಿರುವ ಕೊಲೆ ಎಂದು ಪೋಸ್ಟ್ ಮಾರ್ಟಂ ವರದಿಯಲ್ಲಿ ತಿಳಿದು ಬಂದಿದೆ.

ಚೀಟಿಯಲ್ಲಿ ಸಿಕ್ಕ ಮೊಬೈಲ್ ಸಂಖ್ಯೆಯ ಜಾಡು ಹಿಡಿದ ಪೊಲೀಸರು, ನಗರದಲ್ಲಿ ನಾಪತ್ತೆಯಾದ ವ್ಯಕ್ತಿಗಳ ಜಾಗಗಳಲ್ಲಿ ಲಭ್ಯವಿದ್ದ ಸಿಸಿ ಟಿವಿ ದೃಶ್ಯಾವಳಿಗಳನ್ನೆಲ್ಲಾ ಜಾಲಾಡಿದ್ದಾರೆ. ಮೊಬೈಲ್ ಸಂಖ್ಯೆಗಳ ಬೆನ್ನತ್ತಿದಾಗ ಇಲ್ಲಿನ ವೈಸಿಎಂ ಆಸ್ಪತ್ರೆಯ ಆವರಣದಲ್ಲಿರುವ ಭಿಕ್ಷುಕನೊಬ್ಬನವರೆಗೂ ತನಿಖೆ ಸಾಗಿದೆ.

ಆಸ್ಪತ್ರೆಯ ಆವರಣದಲ್ಲಿದ್ದ ಭಿಕ್ಷುಕ ಹಾಗೂ ತಪ್ಪಿಸಿಕೊಂಡಿದ್ದ ಮತ್ತೊಬ್ಬ ವ್ಯಕ್ತಿ ಇಬ್ಬರೂ ಪರಸ್ಪರ ಮಾತನಾಡುತ್ತಿರುವ ದೃಶ್ಯವೊಂದು ಸಿಸಿಟಿವಿ ವಿಡಿಯೋದಲ್ಲಿ ಸಿಕ್ಕಿದೆ. ಆ ವೇಳೆ ಭಿಕ್ಷುಕ ಸಹ ನಾಪತ್ತೆಯಾಗಿದ್ದ. ಇದರಿಂದ ಇನ್ನಷ್ಟು ಚುರುಕಾಗಿ ತನಿಖೆ ನಡೆಸಿದ ಪೊಲೀಸರಿಗೆ ಈ ಇಬ್ಬರ ಪೈಕಿ ಒಬ್ಬರು ಮತ್ತೊಬ್ಬರನ್ನು ಕೊಲೆ ಮಾಡಿದ್ದಾರೆ ಎಂಬ ಶಂಕೆಗಳು ಬಲಗೊಂಡವು.

ಇಲ್ಲಿನ ವಾಕಡ್ ಪ್ರದೇಶದಿಂದ ಕಾಣೆಯಾದವರ ಬಗ್ಗೆ ದೂರು ಕೊಟ್ಟಿದ್ದ ಅವರ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿದ ಬಳಿಕವೂ ಪೊಲೀಸರಿಗೆ ಯಾವುದೇ ಮಹತ್ವದ ಸುಳಿವು ಸಿಕ್ಕಿರಲಿಲ್ಲ. ತಪ್ಪಿಸಿಕೊಂಡಿದ್ದ ವ್ಯಕ್ತಿಯ ಸೂಟ್‌ಕೇಸ್‌ನಲ್ಲಿ ನೋಟ್‌ ಪುಸ್ತಕವೊಂದನ್ನು ಪೊಲೀಸರು ಪರಿಶೀಲಿಸಿದ್ದಾರೆ.

ಅದರಲ್ಲಿ 7-8 ಹೆಸರುಗಳು ಇದ್ದು, ತಾನೇನಾದರೂ ಎಲ್ಲಾದರೂ ತಪ್ಪಿಸಿಕೊಂಡರೆ ಅಥವಾ ಕೊಲೆಯಾದರೆ ಅದಕ್ಕೆ ಈ ವ್ಯಕ್ತಿಗಳೇ ಕಾರಣ ಎಂದು ಬರೆಯಲಾಗಿತ್ತು. ಆ ಎಲ್ಲಾ ವ್ಯಕ್ತಿಗಳನ್ನು ಪೊಲೀಸರು ಪ್ರಶ್ನಿಸಿದ್ದಾರೆ.

ಆಗ ತಪ್ಪಿಸಿಕೊಂಡಿರುವ ವ್ಯಕ್ತಿ ಮೆಹಬೂಬ್ ದಸ್ತಗಿರ್‌ ಎಂದು ತಿಳಿದು ಬಂದಿದ್ದು, ಆತ ಆ ಎಲ್ಲರಿಂದ 80 ಲಕ್ಷ ರೂ.ಗಳನ್ನು ಪಡೆದಿದ್ದ ಎಂದು ತಿಳಿದು ಬಂದಿದೆ. ಮೆಹಬೂಬ್‌, ಸಾಲ ಹಿಂದಿರುಗಿಸುವುದನ್ನು ತಪ್ಪಿಸಿಕೊಳ್ಳಲು, ತಾನು ಮೃತಪಟ್ಟಿರುವುದಾಗಿ ಸುಳ್ಳು ಹಬ್ಬಿಸಲು ಮುಂದಾಗಿದ್ದ ಎಂದು ಪೊಲೀಸರಿಗೆ ಶಂಕೆ ಬಂದಿದೆ.

ದೌಂಡ್ ರೈಲ್ವೇ ನಿಲ್ದಾಣದ ಬಳಿ ಮೆಹಬೂಬ್‌ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ವಾಕಡ್ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ನಾಪತ್ತೆಯಾಗಿರುವುದಾಗಿ ದೂರು ಕೊಟ್ಟಿದ್ದ ಮೆಹಬೂಬ್ ಪತ್ನಿ, ಖುದ್ದು ಪೊಲೀಸರು ಮುಂದೆ ಬಂದಾಗ ಅವರಿಗೆ ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ಮನವರಿಕೆ ಮಾಡಲು ಸಾಧ್ಯವಾಗಿಲ್ಲ.

ತನಿಖೆ ವೇಳೆ ಬಾಯಿಬಿಟ್ಟ ಮೆಹಬೂಬ್‌, ತನ್ನ ಗೆಳೆಯ ಸಂದೀಪ್ ಪುಂಡಲಿಕ್ ಮಣಿಕರ್‌ನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ತನ್ನ ಬೈಕ್‌ನಲ್ಲಿ ಸಂದೀಪ್‌ರನ್ನು ಕೂರಿಸಿಕೊಂಡು ಪುಣೆಯ ಅನೇಕ ಜಾಗಗಳಿಗೆ ಕರೆದೊಯ್ದ ಸಂದೀಪ್ ಕೊನೆಗೆ ಅಲ್ಲಿನ ಉಡನ್‌ಶಾವಾಲಿ ದರ್ಗಾದ ಬಳಿ ಕರೆದೊಯ್ದು ಆತನ ಬೆನ್ನಿಗೆ ಚೂರಿ ಇರಿದು ಕೊಂದಿದ್ದಾನೆ.

ಮೆಹಬೂಬ್‌ ಮೇಲೆ ವಂಚನೆಯ ಸಾಕಷ್ಟು ಪ್ರಕರಣಗಳಿದ್ದು, ಆತನನ್ನು ಪೊಲೀಸ್ ಕಸ್ಟಡಿಗೆ ಐದು ದಿನಗಳ ಮಟ್ಟಿಗೆ ಒಪ್ಪಿಸಲಾಗಿದೆ. ಆತನ ಹುಸಿ ಸಾವಿನ ಸುದ್ದಿ ಪಸರಿಸಲು ನೆರವಾಗಿದ್ದಾರೆ ಎನ್ನಲಾದ ಇನ್ನಷ್ಟು ಮಂದಿಯನ್ನು ಮುಂದಿನ ದಿನಗಳಲ್ಲಿ ಬಂಧಿಸುವ ಸಾಧ್ಯತೆಗಳಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...