ಕೋವಿಡ್ 19ನಿಂದ ಬಳಲುತ್ತಿದ್ದ ತಾಯಿ ಅವಧಿಗೂ ಮೊದಲೇ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದು, ಈ ತಾಯಿಯಿಲ್ಲದ ಕಂದಮ್ಮ ಇದೀಗ ಉಳಿದೆಲ್ಲ ತಾಯಿಯರಿಂದ ಆರೈಕೆ ಪಡೆಯುತ್ತಿದೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ 32 ವರ್ಷದ ಬೇಬಿ ಮಿನಾಲ್ ವರ್ಣೇಕರ್ ಎಂಬವರು ಅವಧಿಗೂ ಮುನ್ನವೇ ಮಗುವಿಗೆ ಜನ್ಮ ನೀಡಿದ್ದರು. ಈಕೆ ಕೋವಿಡ್ ರೋಗಿಯಾಗಿದ್ದರಿಂದ ಹೆರಿಗೆಯಾದ ಕೆಲವೇ ನಿಮಿಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಕೃತಕ ಎದೆಹಾಲಿನಿಂದ ಅಲರ್ಜಿ ಹೊಂದಿದ್ದ ಈ ಮಗುವಿಗೆ ಮಹಾರಾಷ್ಟ್ರದ ಅನೇಕ ತಾಯಂದಿರು ತಮ್ಮ ಎದೆಹಾಲುಣಿಸಿ ಮಗುವಿನ ಜೀವ ಉಳಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಪುಟ್ಟ ಕಂದಮ್ಮ ಇವಾನ್ ತಂದೆ ಚೇತನ್, ನನ್ನ ಪತ್ನಿ ಏಪ್ರಿಲ್ 8ರಂದು ಕೊರೊನಾದಿಂದಾಗಿ ನಿಧನಳಾದಳು. ಇದಾದ ಬಳಿಕ ನನ್ನ ಮಗುವನ್ನ ಉಳಿಸಲು ನಾಗ್ಪುರದ ಅನೇಕ ತಾಯಂದಿರು ಮಾಡಿದ ಸಹಾಯಕ್ಕೆ ಧನ್ಯವಾದ ತಿಳಿಸುವೆ. ನನ್ನ ಮಗು ಕೃತಕ ಹಾಲಿನಿಂದ ಅಲರ್ಜಿ ಹೊಂದಿದ್ದರಿಂದ ಈ ಎಲ್ಲಾ ತಾಯಂದಿರು ಒಂದಾಗಿ ಇವಾನ್ ಜೀವ ಉಳಿಸಿದ್ದಾರೆ ಎಂದು ಹೇಳಿದ್ರು.
ಇವಾನ್ನನ್ನ ಮನೆಗೆ ಕರೆದುಕೊಂಡು ಬಂದ ಬಳಿಕವೂ ಚೇತನ್ ಕುಟುಂಬ ತಾಯಿ ಹಾಲಿಗಾಗಿ ಹುಡುಕಾಟ ನಡೆಸಿದೆ. ಈ ವೇಳೆ ಅಧುನಿಕಾ ಪ್ರಕಾಶ್ ಎಂಬವರು ರಚಿಸಿದ Breastfeeding Support for Indian Women ಎಂಬ ಫೇಸ್ಬುಕ್ ಪೇಜ್ ಸಹಾಯ ಮಾಡಿದೆ. ಅಲ್ಲದೇ ಟ್ವಿಟರ್ನಲ್ಲೂ ಈ ಮಾಹಿತಿಯನ್ನ ಯಾರೋ ಶೇರ್ ಮಾಡಿದ್ದು ನನ್ನ ಕಂದಮ್ಮಗೆ ಸಹಾಯದ ಮಹಾಪೂರವೇ ಹರಿದುಬರ್ತಿದೆ ಎಂದು ಚೇತನ್ ಹೇಳಿದ್ದಾರೆ.