ತಾನು ಸಂಬಂಧ ಹೊಂದಿದ್ದ ಮಹಿಳೆಯನ್ನ ಕೊಲೆ ಮಾಡಿ ಆಕೆಯ ಶವವನ್ನ ಫ್ಲ್ಯಾಟ್ನ ಗೋಡೆಯಲ್ಲಿ ಅಡಗಿಸಿ ಇಟ್ಟಿದ್ದ 30 ವರ್ಷದ ಆರೋಪಿಯನ್ನ ಬಂಧಿಸಿದ ಘಟನೆ ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯಲ್ಲಿ ನಡೆದಿದೆ. 32 ವರ್ಷದ ಮಹಿಳೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಈ ಕೊಲೆ ನಡೆದಿದ್ದು ಫ್ಲ್ಯಾಟ್ನ ಗೊಡೆಯಿಂದ ಮಹಿಳೆಯ ಅಸ್ಥಿಪಂಜರವನ್ನ ಹೊರತೆಗೆಯಲಾಗಿದೆ. ಬಂಧಿತ ಆರೋಪಿ ಹಾಗೂ ಕೊಲೆಯಾದ ಮಹಿಳೆ ಕಳೆದ 5 ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಕೊಲೆಯಾದ ಮಹಿಳೆ ಆರೋಪಿಯ ಜೊತೆ ಕೊನೆಯ ಬಾರಿಗೆ ಅಕ್ಟೋಬರ್ 21 ನೇ ತಾರೀಖಿನಂದು ಕಾಣಿಸಿಕೊಂಡಿದ್ದಳು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮಹಿಳೆಯ ಕುಟುಂಬಸ್ಥರು ಆಕೆ ಎಲ್ಲಿದ್ದಾಳೆ ಎಂದು ಆರೋಪಿಯ ಬಳಿ ಕೇಳಿದ್ರೆ ಆತ ಆಕೆ ಗುಜರಾತ್ನ ವಾಪಿಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿಕೊಂಡು ಬರ್ತಿದ್ದ ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಆಕೆಯ ಕುಟುಂಬಸ್ಥರು ಪೊಲೀಸ್ ಕೇಸ್ ದಾಖಲಿಸಿದ ಬಳಿಕ ಸತ್ಯಾಂಶ ಬೆಳಕಿಗೆ ಬಂದಿದೆ.