ರಾಂಚಿ: ದೀಪಾವಳಿ ಬಂದಿದೆ. ಎಲ್ಲೆಡೆ ಹಣತೆ ಹಚ್ಚಿ ಬೆಳಗುವ ಸಮಯ. ಒಂದು ಹಣತೆ ಗರಿಷ್ಠ ಎಂದರೆ ಎರಡು ತಾಸು ಉರಿಯಬಹುದು. ಆದರೆ, ದಿನವಿಡೀ ಉರಿಯುವ ಹಣತೆಯನ್ನು ಛತ್ತೀಸ್‌ಗಡದ ಮಡಿಕೆ ಕಲಾಕಾರನೊಬ್ಬ ಕಂಡು ಹಿಡಿದಿದ್ದಾನೆ.
ಛತ್ತೀಸ್‌ಗಡ ರಾಜ್ಯದ ಕೊಂಡಗೌನ್ ಎಂಬ ಊರಿನ ಅಶೋಕ ಚಕ್ರಧಾರಿ ಎಂಬ ಮಣ್ಣಿನ ಮೂರ್ತಿ ತಯಾರಿಸುವ ಕಲಾವಿದ ಯು ಟ್ಯೂಬ್ ವಿಡಿಯೋ ನೋಡಿ ಪಾರಂಪರಿಕ ಮಡಿಕೆ ತಯಾರಿಕೆಯನ್ನು ಆಧುನಿಕ ವಿಧಾನ ಬಳಸಿ ಮಣ್ಣಿನ ಹಣತೆ ತಯಾರಿಸಿದ್ದು, ಅದಕ್ಕೆ ‘ಮ್ಯಾಜಿಕ್ ಲ್ಯಾಂಪ್’ ಎಂದು ಹೆಸರು ನೀಡಿದ್ದಾರೆ. ಹಣತೆಯ ವಿಶೇಷತೆಯ ಕುರಿತು ಮಾಡಿದ ವಿಡಿಯೋವನ್ನು ಅಶೋಕ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ.
ಮ್ಯಾಜಿಕ್ ಲ್ಯಾಂಪ್ ಸಾಮಾನ್ಯ ಹಣತೆಗಿಂತ ದೊಡ್ಡದಿದೆ. ಮಾರುಕಟ್ಟೆಯಲ್ಲಿ ಸಿಗುವ ಸೀಮೆ ಎಣ್ಣೆ ಲಾಟಿನ್ ಮಾದರಿಯಲ್ಲಿ ಕಾಣುವ ಇದಕ್ಕೆ ಎದುರು ಹಣತೆ ಜೋಡಿಸಲಾಗಿದೆ. ದ್ರವ ವಸ್ತು ತನ್ನ ಮಟ್ಟ ಕಾಯ್ದುಕೊಳ್ಳುವ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗಿದೆ. ಹಣತೆಯಲ್ಲಿ ಎಣ್ಣೆ ಖಾಲಿಯಾಗುತ್ತಿದ್ದಂತೆ ಅದಕ್ಕೆ ಜೋಡಿಸಲಾದ ಗೋಲಾಕಾರದ ಸಣ್ಣ ಮಣ್ಣಿನ ಪಾತ್ರೆಯಿಂದ ತಾನಾಗೇ ಎಣ್ಣೆ ಬೀಳುತ್ತದೆ. ಮತ್ತು ಹಣತೆಯಲ್ಲಿ ಎಣ್ಣೆ ಭರ್ತಿಯಾದ ನಂತರ ತಾನಾಗಿಯೇ ಸ್ಥಗಿತವಾಗುತ್ತದೆ.