2020ರ ಕೊನೆಯ ಚಂದ್ರಗ್ರಹಣವು ಕಾರ್ತಿಕ ಪೂರ್ಣಿಮೆಯ ನವೆಂಬರ್ 30ರಂದು ಜರುಗಲಿದೆ. ಈ ದೃಶ್ಯಕಾವ್ಯವು ಮಧ್ಯಾಹ್ನ 1:04 ಗಂಟೆಯಿಂದ ಸಂಜೆ 5:22 ಗಂಟೆಯವರೆಗೂ ಗೋಚರಿಸಲಿದೆ ಎಂದು ಅಂದಾಜಿಸಲಾಗಿದೆ.
ಇದೇ ವರ್ಷದ ಜನವರಿ 10, ಜೂನ್ 5 ಹಾಗೂ ಜುಲೈ 4ರಂದು ಚಂದ್ರ ಗ್ರಹಣಗಳು ಸಂಭವಿಸಿದ್ದವು. ಈ ಬಾರಿಯ ಚಂದ್ರ ಗ್ರಹಣವು ಹಿಂದಿನವಕ್ಕಿಂತ ತುಸು ಹೆಚ್ಚಿನ ಅವಧಿಗೆ ಇರಲಿದೆ.
ಸೂರ್ಯಾಸ್ತಕ್ಕೂ ಮುನ್ನ ಚಂದ್ರ ಗ್ರಹಣ ಸಂಭವಿಸುತ್ತಿರುವ ಕಾರಣ ದೇಶದ ಬಹುತೇಕ ಕಡೆಗಳಲ್ಲಿ ಜನರು ಈ ದೃಶ್ಯವನ್ನು ನೋಡಲು ಆಗುವುದಿಲ್ಲ.
ಗ್ರಹಣವು ನವೆಂಬರ್ 30ರ ಮದ್ಯಾಹ್ನ 1:04ಕ್ಕೆ ಆರಂಭಗೊಂಡು, 3:13ರ ವೇಳೆಗೆ ಮಧ್ಯಂತರಕ್ಕೆ ಆಗಮಿಸಲಿದೆ. ಅದೇ ದಿನ ಸಂಜೆ 5:22ಕ್ಕೆ ಅಂತ್ಯವಾಗಲಿದೆ. ಗ್ರಹಣದ ಪರಿಣಾಮವು ವೃಷಭ ರಾಶಿ ರೋಹಿಣಿ ನಕ್ಷತ್ರದವರಿಗೆ ಆಗಲಿದ್ದು, ಅನ್ಯ ರಾಶಿಗಳ ಮೇಲೂ ಸಹ ತಕ್ಕಮಟ್ಟಿಗೆ ಆಗಲಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.