ನೀವು ಇದನ್ನ ಮಾತೃಭಾಷಾ ಪ್ರೇಮ ಅನ್ನಿ ಇಲ್ಲವೇ ಹೊಸದನ್ನ ಅನ್ವೇಷಣೆ ಮಾಡುವ ಬುದ್ಧಿ ಎಂದುಕೊಳ್ಳಿ. ಮಧ್ಯದಲ್ಲೇ ಶಾಲೆಯನ್ನ ಬಿಟ್ಟು ಕುಶಲಕರ್ಮಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇದೀಗ ವಿಕಿಪಿಡಿಯಾ ಎಡಿಟರ್ ಆಗಿದ್ದಾನೆ. ವಿಕಿಪಿಡಿಯಾಗೆ ಈತ 1,800 ಹಿಂದಿ ಲೇಖನಗಳನ್ನ ಬರೆದುಕೊಟ್ಟಿದ್ದಾನೆ.
ತನ್ನ ಮೊಬೈಲ್ನಲ್ಲೇ ಟೈಪ್ ಮಾಡುವ ಮೂಲಕ ಈವರೆಗೆ 57000 ಪುಟಗಳನ್ನ ಬರೆದಿದ್ದಾನೆ. ಈತನ ಹಿಂದಿ ಪ್ರೇಮವನ್ನ ಗೌರವಿಸಿದ ವಿಕಿಪೀಡಿಯಾ ಈತನಿಗೆ ಉಡುಗೊರೆ ರೂಪದಲ್ಲಿ ಉಚಿತ ಲ್ಯಾಪ್ಟಾಪ್ ಹಾಗೂ ವೈ ಫೈ ಸೌಕರ್ಯ ನೀಡಿದೆ.
ಜೋಧಪುರದ ಪುಟ್ಟ ಹಳ್ಳಿಯ ನಿವಾಸಿಯಾಗಿರುವ 22 ವರ್ಷದ ರಾಜು ಜಾಂಗಿದ್, ಕುಟುಂಬದಿಂದ ಬಂದ ಕುಶಲಕರ್ಮಿ ಕೆಲಸವನ್ನ ಮುಂದುವರಿಸಿಕೊಂಡು ಹೋಗ್ತಿದ್ದಾರೆ. ವಿಕಿಪೀಡಿಯಾದಲ್ಲಿ ಹಿಂದಿ ಭಾಷೆಯಲ್ಲಿ ಏನನ್ನಾದರೂ ಹುಡುಕಾಟ ನಡೆಸುವವರಿಗೆ ನೆರವಾಗಬೇಕು ಅಂತಾ ರಾಜು ಈ ಕೆಲಸಕ್ಕೆ ಕೈ ಹಾಕಿದ್ದಾರೆ.
ರಾಜು ಪ್ರಸ್ತುತ ವಿಕಿ ಸ್ವಾಸ್ತಾ ಎಂಬ ವಿಕಿಪೀಡಿಯಾದ ವಿಶೇಷ ಯೋಜನೆಗಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ರಾಜು ಆರೋಗ್ಯ ಸಂಬಂಧಿತ ಲೇಖನಗಳ ಮಾಹಿತಿಯನ್ನು ಹಾಕುತ್ತಿದ್ದಾರೆ. ಅಲ್ಲದೆ, ಅವರು ಭಾರತದಲ್ಲಿ ವಿಕಿಪೀಡಿಯಾದ ಅನೇಕ ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ.