ಛತ್ತಿಸಗಢದ ಬಸ್ತಾರ್ ಜಿಲ್ಲೆಯ ಅಲೋರ್ ಹಳ್ಳಿಯ ಬೆಟ್ಟದ ಮೇಲೆ ಒಂದು ದೇವಸ್ಥಾನವಿದೆ. ಇಲ್ಲಿರುವ ಲಿಂಗವನ್ನು ದೇವಿಯ ಸ್ವರೂಪ ಎಂದು ಜನರು ನಂಬುತ್ತಾರೆ. ಎಲ್ಲ ಕಡೆ ಲಿಂಗವನ್ನು ಈಶ್ವರ ಎಂದು ಪೂಜಿಸಿದರೆ ಇಲ್ಲಿ ಶಿವ ಮತ್ತು ದೇವಿ ಶಕ್ತಿ ಎರಡನ್ನೂ ಆರಾಧಿಸಲಾಗುತ್ತದೆ.
ಈ ದೇವಸ್ಥಾನ ವರ್ಷಕ್ಕೆ ಒಂದೇ ಬಾರಿ ತೆರೆಯುತ್ತದೆ. ಆ ಒಂದು ದಿನದ ಪೂಜೆಯ ನಂತರ ದೇವಸ್ಥಾನದ ಬಾಗಿಲನ್ನು ಮುಚ್ಚಿಬಿಡುತ್ತಾರೆ. ಹೀಗೆ ಮುಚ್ಚಿದ ಬಾಗಿಲ ಮುಂದೆ ಮರಳನ್ನು ಹಾಕಲಾಗುತ್ತದೆ.
ಒಂದು ವರ್ಷ ಕಳೆದ ನಂತರ ಮತ್ತೆ ದೇವಸ್ಥಾನದ ಬಾಗಿಲನ್ನು ತೆರೆದಾಗ ಮರಳಿನ ಮೇಲೆ ಯಾವುದಾದರೂ ಚಿಹ್ನೆ ಮೂಡಿರುತ್ತದೆ. ಈ ಚಿಹ್ನೆ ಆ ವರ್ಷದ ಲಾಭ ಅಥವಾ ನಷ್ಟವನ್ನು ಸೂಚಿಸುತ್ತದೆ. ಒಮ್ಮೆ ಮರಳಿನ ಮೇಲೆ ಕಮಲದ ಚಿಹ್ನೆ ಕಾಣಿಸಿದರೆ ಧನ ಸಂಪತ್ತು ಹೆಚ್ಚುತ್ತದೆ ಎಂದು ಊರಿನ ಜನರು ಹೇಳುತ್ತಾರೆ. ದೇವಸ್ಥಾನದ ಒಳಗೆ ಹೋಗುವುದಾದರೆ ಮಂಡಿಯೂರಿಯೇ ಹೋಗಬೇಕು. ಒಳಗಡೆ ಹೋದ ಮೇಲೆ 25-30 ಜನ ನಿಲ್ಲುವಷ್ಟು ಸ್ಥಳಾವಕಾಶವಿದೆ. ಇಲ್ಲಿನ ದೇವಿಗೆ ಸೌತೆಕಾಯಿಯ ನೈವೇದ್ಯ ನಡೆಯುತ್ತದೆ. ಮಕ್ಕಳಾಗದ ದಂಪತಿಗಳು ಸೌತೆಕಾಯಿಯನ್ನು ನೈವೇದ್ಯ ಮಾಡಿಸಿ ಇಬ್ಬರೂ ಅದನ್ನು ತಿನ್ನುವುದು ಇಲ್ಲಿನ ವಾಡಿಕೆ. ಹೀಗೆ ಮಾಡುವುದರಿಂದ ದೇವಿ ಸಂತಾನ ಭಾಗ್ಯ ಕರುಣಿಸುತ್ತಾಳಂತೆ.