ದೇಶದಲ್ಲಿ ಕೊರೊನಾ ಕೇಸ್ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರೋ ಬೆನ್ನಲ್ಲೇ ದೇಶದ 10 ರಾಜ್ಯಗಳು ಕೋವಿಡ್ ಲಸಿಕೆಯ ಅಭಾವವವನ್ನ ಎದುರಿಸುತ್ತಿವೆ.
ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಬುಧವಾರ ವ್ಯಾಕ್ಸಿನೇಷನ್ ಡ್ರೈವ್ ಕಾರ್ಯಕ್ರಮವನ್ನ ನಿಲ್ಲಿಸಲಾಗಿದೆ. ಕೇವಲ 20 ಡೋಸ್ ಲಸಿಕೆ ಬಾಕಿ ಉಳಿದ್ದಿದ್ದರಿಂದ ಅನಿವಾರ್ಯವಾಗಿ ಲಸಿಕೆ ಕೇಂದ್ರಗಳನ್ನ ಬಂದ್ ಮಾಡಲಾಗಿತ್ತು.
ಇತ್ತ ಯವತ್ಮಾಲ್, ಅಕೋಲಾ. ಬುಲ್ಧಾನಾ ಹಾಗೂ ವಾಶಿಗಳಲ್ಲೂ ಲಸಿಕೆ ನೀಡಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ.ಇನ್ನುಳಿದಂತೆ ಒಡಿಶಾ, ಆಂಧ್ರಪ್ರದೇಶ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ್, ಚತ್ತೀಸಗಢ, ಬಿಹಾರ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಇನ್ನೊಂದು ಮೂರ್ನಾಲ್ಕು ದಿನಗಳಿಗೆ ಆಗುವಷ್ಟು ದಾಸ್ತಾನು ಮಾತ್ರ ಉಳಿದಿದೆ. ಇದರಿಂದ ಲಸಿಕೆ ನೀಡಿಕೆ ವೇಗವನ್ನ ಹೆಚ್ಚಿಸಬೇಕು ಎಂಬ ಕೇಂದ್ರ ಸರ್ಕಾರದ ಪ್ಲಾನ್ಗೆ ಹಿನ್ನಡೆಯಾದಂತಾಗಿದೆ.
ಹೆಚ್ಚಿನ ರಾಜ್ಯಗಳು ಶೀಘ್ರದಲ್ಲೇ ಲಸಿಕೆಯನ್ನ ಪೂರೈಕೆ ಮಾಡಿ ಅಂತಾ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಒಡಿಶಾ ರಾಜ್ಯಕ್ಕೆ ಏಪ್ರಿಲ್ 15ರ ಬಳಿಕ 3.49 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಸಿಗಲಿದೆ ಎನ್ನಲಾಗಿದೆ. ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್ತ ಕುಮಾರ್ ಮೊಹಾಪಾತ್ರ ಮಂಗಳವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ಗೆ ಪತ್ರ ಬರೆಯುವ ಮೂಲಕ 15 ರಿಂದ 20 ಲಕ್ಷ ಕೋವಿಶೀಲ್ಡ್ ಡೋಸ್ಗಳನ್ನ ಶೀಘ್ರದಲ್ಲೇ ಒಡಿಶಾಗೆ ಪೂರೈಸಿ ಎಂದು ಮನವಿ ಮಾಡಿದ್ದರು. ಒಡಿಶಾದ ಬಳಿ ಇದೀಗ 6.5 ಲಕ್ಷ ಡೋಸ್ ಲಸಿಕೆ ಬಾಕಿ ಉಳಿದಿದ್ದು ಇದರಲ್ಲಿ ಮೂರು ದಿನಗಳ ಕಾಲ ಲಸಿಕೆ ಕಾರ್ಯಕ್ರಮ ನಡೆಸಬಹುದಾಗಿದೆ.
ಆಂಧ್ರ ಪ್ರದೇಶದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಏಪ್ರಿಲ್ 15ರ ಬಳಿಕ 10.8 ಲಕ್ಷ ಡೋಸ್ ಲಸಿಕೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಈಗಿರುವ ಲಸಿಕೆಯಲ್ಲಿ ಇನ್ನೊಂದು ಮೂರ್ನಾಲ್ಕು ದಿನ ತಳ್ಳಬಹುದಾಗಿದೆ.
ಪಶ್ಚಿಮ ಬಂಗಾಳಕ್ಕೆ ಲಸಿಕೆಯ ಮರುಪೂರೈಕೆ ಯಾವಾಗ ಆಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಬುಧವಾರದ ಲಸಿಕೆ ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ 12 ಲಕ್ಷ ಡೋಸ್ ಬಾಕಿ ಉಳಿದಿದೆ.
ಉತ್ತರ ಪ್ರದೇಶ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ರಾಜ್ಯದಲ್ಲಿ ಕೊರೊನಾ ಲಸಿಕೆಯ ಅಭಾವವಿದೆ ಎಂದು ಹೇಳಿಕೆ ನೀಡಿದ್ದರು. ಸದ್ಯ ಉತ್ತರ ಪ್ರದೇಶದಲ್ಲಿ 12.33 ಲಕ್ಷ ಡೋಸ್ಗಳಿದ್ದು, ಇದರಲ್ಲಿ ಮೂರ್ನಾಲ್ಕು ದಿನ ಲಸಿಕೆ ಅಭಿಯಾನ ನಡೆಸಬಹುದಾಗಿದೆ. ಪಂಜಾಬ್ನಲ್ಲಿ 5 ಲಕ್ಷ ಡೋಸ್ಗಳ ದಾಸ್ತಾನಿದ್ದು 4 ದಿನಗಳವರೆಗೆ ಯಾವುದೇ ಚಿಂತೆ ಇಲ್ಲ. ಪಂಜಾಬ್ ಕೇಂದ್ರ ಸರ್ಕಾರದ ಬಳಿಕ 15 ಲಕ್ಷ ಡೋಸ್ಗಳ ಪೂರೈಕೆಗೆ ಬೇಡಿಕೆ ಇಟ್ಟಿದೆ. ರಾಜಸ್ಥಾನ, ಬಿಹಾರ, ಚತ್ತೀಸಗಢ ಹಾಗೂ ಉತ್ತರಾಖಂಡ್ನಲ್ಲೂ ಇದೇ ಪರಿಸ್ಥಿತಿ ಇದೆ.