ಪೊಲೀಸ್ ಇಲಾಖೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದೆ. ವಿವಿಧ ರಾಜ್ಯಗಳ ಪೊಲೀಸ್ ಇಲಾಖೆ ಅಧಿಕೃತ ಟ್ವಿಟರ್ ಖಾತೆಗಳಲ್ಲಿ ಜನ ಜಾಗೃತಿ ಮೂಡಿಸುವ ಸಲುವಾಗಿ ಫನ್ನಿ ವಿಡಿಯೋಗಳನ್ನ ಶೇರ್ ಮಾಡಲಾಗುತ್ತೆ. ಬಹುತೇಕ ಎಲ್ಲಾ ಪೋಸ್ಟ್ಗಳು ವೈರಲ್ ಆಗುತ್ತೆ.
ಈ ಸಾಲಿಗೆ ಸೇರಿದ ಮತ್ತೊಂದು ವಿಡಿಯೋ ಕೇರಳ ಪೊಲೀಸರು ಪೋಸ್ಟ್ ಮಾಡಿರುವ ತ್ರಿಬಲ್ ರೈಡಿಂಗ್. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮೂವರು ಪೊಲೀಸರು ಕಂಡೊಡನೆಯೇ ಕಕ್ಕಾಬಿಕ್ಕಿಯಾಗಿ ಓಡುವ ಸಿಸಿ ಟಿವಿ ದೃಶ್ಯಾವಳಿ ಇದಾಗಿದೆ.
ಫೇಸ್ಬುಕ್ನಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಮೂವರು ಸ್ಕೂಟಿಯ ಮೇಲೆ ಸಂಚರಿಸುತ್ತಿರ್ತಾರೆ.
ಮೂವರಲ್ಲಿ ಒಬ್ಬರೂ ಹೆಲ್ಮೆಟ್ ಧರಿಸಿಲ್ಲ. ಪೊಲೀಸರ ಜೀಪ್ ಕಂಡೊಡನೆಯೇ ಸ್ಕೂಟಿಯನ್ನ ನಿಲ್ಲಿಸ್ತಾರೆ. ಇದರಲ್ಲಿ ಒಬ್ಬ ಸ್ಕೂಟಿಯಿಂದ ಇಳಿದು ಓಡಿ ಹೋಗ್ತಾನೆ. ಸ್ಕೂಟಿ ಬಿಡುತ್ತಿರುವವನೂ ಸಹ ಸ್ಕೂಟಿ ಸಮೇತ ಪರಾರಿಯಾಗುತ್ತಾನೆ. ಆದರೆ ಇನ್ನೊಬ್ಬ ವ್ಯಕ್ತಿ ಮಾತ್ರ ಮಾಸ್ಕ್ನ್ನು ಧರಿಸಿ ಏನೂ ಆಗದವನಂತೆ ರಸ್ತೆಯ ಮೇಲೆ ನಡೆದುಕೊಂಡು ಹೋಗಿದ್ದಾನೆ.
ಪೊಲೀಸ್ ವ್ಯಾನ್ ಈ ವ್ಯಕ್ತಿ ಇದ್ದಲ್ಲಿಯೇ ಬಂದು ನಿಂತಿದೆ. ವ್ಯಾನ್ ಒಳಗಿದ್ದ ಪೊಲೀಸರು ಈತನಿಗೆ ಕೆಲ ಪ್ರಶ್ನೆಗಳನ್ನ ಕೇಳಿದ್ದಾರೆ. ಈ ಭೂಪ ಮಾತ್ರ ಏನೂ ಆಗೇ ಇಲ್ಲ ಎಂಬಂತೆ ಮಾತನಾಡುತ್ತಿದ್ದಾನೆ. ಈ ವಿಡಿಯೋಗೆ, ಗೋಪು, ತಪ್ಪು ಮಾಡದವರು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ.
https://youtu.be/UNw2vGK98uY