ಇಂದಿನ ದಿನಮಾನದ ಟೆಕ್ ಸಂಸ್ಕೃತಿಗೆ ಒಗ್ಗಿಕೊಳ್ಳುವ ಯತ್ನದಲ್ಲಿ, ಕೇರಳದ ತ್ರಿಶ್ಶೂರು ಜಿಲ್ಲೆಯ 90ರ ವೃದ್ಧೆಯೊಬ್ಬರು ಲ್ಯಾಪ್‌ಟಾಪ್ ಬಳಸುವುದನ್ನು ಕಲಿತಿರುವ ಸುದ್ದಿಯೊಂದು ಸದ್ದು ಮಾಡುತ್ತಿದೆ.
ಮೇರಿ ಮ್ಯಾಥ್ಯೂಸ್ ಹೆಸರಿನ ಈ ವೃದ್ಧೆ ತಮ್ಮ ಕುರ್ಚಿಯಲ್ಲಿ ಕುಳಿತುಕೊಂಡು, ಆರಾಮಾಗಿ ಲ್ಯಾಪ್ಟಾಪ್‌ನಲ್ಲಿ ದೈನಂದಿನ ಸುದ್ದಿ ಓದುತ್ತಿರುವ ಚಿತ್ರಗಳನ್ನು ಅವರ ಮೊಮ್ಮಗ ಅರುಣ್ ಥಾಮಸ್ ಶೇರ್ ಮಾಡಿಕೊಂಡಿದ್ದಾರೆ.
ಮಲೆಯಾಳಂ ದೈನಿಕ ಮಾತೃಭೂಮಿಯ ಇ-ಪೇಪರ್ ಅನ್ನು ಓದುತ್ತಿರುವ ಮೇರಿ ಅವರು ತಮ್ಮ ಇಳಿವಯಸ್ಸಿನಲ್ಲೂ ಅದಮ್ಯ ಉತ್ಸಾಹದ ಮೂಲಕ ಎಲ್ಲರಿಗೂ ಮೆಚ್ಚುಗೆಯಾಗಿದ್ದಾರೆ. ಕೊರೊನಾ ವೈರಸ್ ಸಾಂಕ್ರಮಿಕದ ಕಾರಣದಿಂದ ಮೇರಿಯ ಕುಟುಂಬ, ಮನೆಗೆ ಸುದ್ದಿ ಪತ್ರಿಕೆ ಹಾಕಿಸಿಕೊಳ್ಳುವುದನ್ನು ನಿಲ್ಲಿಸಿರುವ ಕಾರಣ ಅವರಿಗೆ ಅನ್ಯ ಮಾರ್ಗವಿಲ್ಲದೇ ಹೀಗೆ ಮಾಡಬೇಕಾಗಿ ಬಂದಿದೆ.