2018ರಲ್ಲಿ ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಪರ ವಾದ ಮಂಡಿಸಿ ಸುದ್ದಿಯಾಗಿದ್ದ ವಕೀಲೆ ದೀಪಿಕಾ ಸಿಂಗ್ ರಾಜಾವತ್ ಹೊಸ ವಿವಾದವೊಂದನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ. ನವರಾತ್ರಿ ಹಬ್ಬವನ್ನ ಅತ್ಯಾಚಾರ ಪ್ರಕರಣಕ್ಕೆ ಹೋಲಿಸುವ ಟ್ವೀಟ್ ಒಂದನ್ನ ಶೇರ್ ಮಾಡೋಕೆ ಹೋದ ವಕೀಲೆ ಇದೀಗ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಕ್ಟೋಬರ್ 19ರಂದು ವಕೀಲೆ ದೀಪಿಕಾ ಸಿಂಗ್ ರಾಜಾವತ್ ಟ್ವಿಟರ್ನಲ್ಲಿ ನವರಾತ್ರಿ ಹಬ್ಬಕ್ಕೆ ಸಂಬಂಧಿಸಿದ ಕಾರ್ಟೂನ್ ಒಂದನ್ನ ಶೇರ್ ಮಾಡಿದ್ರು. ಎರಡು ಚಿತ್ರಗಳಿದ್ದ ಈ ಕಾರ್ಟೂನ್ನಲ್ಲಿ ಒಂದು ಕಡೆ ಪುರುಷ ದೇವಿಯ ಕಾಲಿಗೆ ನಮಸ್ಕರಿಸ್ತಾ ಇದ್ರೆ, ಇನ್ನೊಂದು ಕಡೆ ಮಹಿಳೆ ಅತ್ಯಾಚಾರ ಮಾಡಲು ಯತ್ನಿಸುತ್ತಿರುವ ರೀತಿಯಲ್ಲಿ ವ್ಯಂಗ್ಯಚಿತ್ರ ಬಿಡಿಸಲಾಗಿತ್ತು.
ಇಂತಹದ್ದೊಂದು ಫೋಟೋವನ್ನ ವಕೀಲೆ ಪೋಸ್ಟ್ ಮಾಡಿದ್ದನ್ನ ಕಂಡ ಹಿಂದೂಗಳು ಕೆಂಡಾಮಂಡಲರಾಗಿದ್ರು. ಹಿಂದೂ ಹಬ್ಬಗಳನ್ನ ಈ ರೀತಿ ಸಾಮಾಜಿಕ ಪಿಡುಗುಗಳಿಗೆ ಯಾಕೆ ಹೋಲಿಕೆ ಮಾಡ್ತೀರಾ ಅಂತಾ ಟ್ವೀಟ್ನಲ್ಲಿ ಪ್ರಶ್ನೆಗಳ ಸುರಿಮಳೆಗೈಯಲಾಗಿತ್ತು. ಬಳಿಕ ಟ್ವಿಟರ್ನಲ್ಲಿ ಅರೆಸ್ಟ್ ದೀಪಿಕಾ ರಾಜಾವತ್ ಎಂಬ ಅಭಿಯಾನವನ್ನೂ ಆರಂಭಿಸಲಾಗಿತ್ತು. ಮಾತ್ರವಲ್ಲದೇ ಅನೇಕ ಹಿಂದೂಪರ ಸಂಘಟನೆಗಳು ನನ್ನ ಮನೆಯ ಮುಂದೆ ಪ್ರತಿಭಟನೆ ಮಾಡ್ತಿದ್ದಾರೆ ಅಂತಾಲೂ ಸ್ವತಃ ದೀಪಿಕಾ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ರು.
2018ರಲ್ಲಿ ಕತುವಾದಲ್ಲಿ 8 ವರ್ಷದ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನ ಕೈಗೆತ್ತಿಕೊಳ್ಳುವ ಮೂಲಕ ದೀಪಿಕಾ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ದೀಪಿಕಾ ರಾಷ್ಟ್ರ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಗಳಿಸಿದ ವಕೀಲೆಯಾಗಿದ್ದಾರೆ.