ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮ ಕೈಗೊಂಡಿದ್ದು, ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸುವುದರ ಜೊತೆಗೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವೆಂದು ಹೇಳಿದೆ.
ಆದರೆ ಬಹಳಷ್ಟು ಸಾರ್ವಜನಿಕರು ನಿಯಮಗಳನ್ನು ಪಾಲಿಸದೆ ಸ್ವತಃ ತಾವು ಸೋಂಕಿಗೊಳಗಾಗುವ ಭೀತಿಯ ಜೊತೆಗೆ ಇತರೆಯವರಿಗೂ ಸಂಕಷ್ಟ ತಂದೊಡ್ಡುತ್ತಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ಕಾನೂನು ಪಾಲನೆ ಪಾಠ ಹೇಳಬೇಕಾದ ಅಧಿಕಾರಿಯೇ ನಿಯಮ ಉಲ್ಲಂಘಿಸಿ ದಂಡ ತೆತ್ತಿದ್ದಾರೆ.
ಇಂತಹುದೊಂದು ಘಟನೆ ಕಾನ್ಪುರದಲ್ಲಿ ನಡೆದಿದ್ದು, ಐಜಿಪಿ ಮೋಹಿತ್ ಅಗರ್ವಾಲ್ ಬರ್ರಾ ಪ್ರದೇಶಕ್ಕೆ ಪರಿಶೀಲನೆಗೆಂದು ತೆರಳಿದ್ದಾಗ ಮಾಸ್ಕ್ ಧರಿಸದೆ ವಾಹನದಿಂದ ಕೆಳಗಿಳಿದು ಓಡಾಡಿದ್ದಾರೆ. ಅಷ್ಟೇ ಅಲ್ಲ, ಸ್ಥಳದಲ್ಲಿ ಇತರೆ ಪೊಲೀಸರೊಂದಿಗೆ ಸಮಾಲೋಚನೆ ನಡೆಸಿದ್ದು, ಆಗ ಅವರಿಗೆ ತಾವು ಮಾಸ್ಕ್ ಧರಿಸಿಲ್ಲ ಎಂಬುದು ಅರಿವಿಗೆ ಬಂದಿದೆ. ಕೂಡಲೇ ಸ್ಥಳೀಯ ಠಾಣಾಧಿಕಾರಿಯನ್ನು ಕರೆದು ತಮ್ಮ ತಪ್ಪನ್ನು ಒಪ್ಪಿಕೊಂಡು ದಂಡ ಪಾವತಿಸಿದ್ದಾರೆ.