ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಸಾರ್ವಜನಿಕರ ಬದುಕನ್ನು ಮಾತ್ರವಲ್ಲ ವಿದ್ಯಾರ್ಥಿಗಳ ಭವಿಷ್ಯವನ್ನೂ ಮುಸುಕು ಮಾಡಿದೆ. ಶಾಲಾ – ಕಾಲೇಜುಗಳಿಗೆ ರಜೆ ಇನ್ನೂ ಮುಂದುವರೆದಿರುವ ಮಧ್ಯೆ ಕೆಲವು ಮುಖ್ಯ ಪರೀಕ್ಷೆಗಳಿಗೆ ದಿನಾಂಕ ಘೋಷಣೆಯಾಗಿತ್ತು.
ಈ ಪೈಕಿ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಪ್ರವೇಶಕ್ಕಾಗಿ ನಡೆಯುವ ಜೆಇಇ ಮೇನ್ ಮತ್ತು ನೀಟ್ ಪರೀಕ್ಷೆಗಳನ್ನು ಇದೀಗ ಸೆಪ್ಟಂಬರ್ ಗೆ ಮುಂದೂಡಲಾಗಿದೆ. ದೇಶದಲ್ಲಿ ಕೊರೊನಾ ಉಲ್ಬಣಿಸುತ್ತಿರುವ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಜೆಇಇ ಮೈನ್ಸ್ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 6 ರ ವರೆಗೆ ಹಾಗೂ ಜೆಇಇ ಅಡ್ವಾನ್ಸ್ ಪರೀಕ್ಷೆ ಸೆಪ್ಟೆಂಬರ್ 27ಕ್ಕೆ ನಡೆಯಲಿದೆ.
ನೀಟ್ ಪರೀಕ್ಷೆ ಸೆಪ್ಟೆಂಬರ್ 13ರಂದು ನಡೆಯಲಿದ್ದು, ವಿದ್ಯಾರ್ಥಿಗಳ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದು, ಇದಕ್ಕೆ ಮನ್ನಣೆ ನೀಡಿರುವ ಸರ್ಕಾರ ಪರೀಕ್ಷೆಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲಿದೆ.