ಜನರಲ್ಲಿ ಕಾನೂನು ಪಾಲನೆಯ ಜಾಗೃತಿಯನ್ನ ಮೂಡಿಸುವ ಸಲುವಾಗಿ ಪೊಲೀಸ್ ಇಲಾಖೆ ಸೋಶಿಯಲ್ ಮೀಡಿಯಾಗೂ ಕಾಲಿಟ್ಟಿದೆ. ಟ್ವಿಟರ್, ಇನ್ಸ್ಟಾಗ್ರಾಂ, ಫೇಸ್ಬುಕ್ನಂತಹ ವೇದಿಕೆಗಳಲ್ಲಿ ಪೊಲೀಸರು ಫನ್ನಿ ವಿಡಿಯೋಗಳ ಮೂಲಕ ಜನರಿಗೆ ಕಾನೂನು ಜಾಗೃತಿ ಮೂಡಿಸ್ತಾ ಇದ್ದಾರೆ.
ಇದರಲ್ಲಿ ಮುಂಬೈ ಪೊಲೀಸ್ ಇಲಾಖೆಯ ಸೋಶಿಯಲ್ ಮೀಡಿಯಾ ಖಾತೆಯಂತೂ ಸಖತ್ ಫೇಮಸ್ ಆಗ್ಬಿಟ್ಟಿದೆ. ಅಂದಹಾಗೆ ಮುಂಬೈ ಪೊಲೀಸ್ ಇಲಾಖೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಇಷ್ಟೊಂದು ಸಕ್ರಿಯ ಹಾಗೂ ಜನಪ್ರಿಯವಾಗಿರೋದಕ್ಕೆ ಕಾರಣ ಸುಂಚಿಕಾ ಪಾಂಡೆ..!
ಹ್ಯಾಟ್ ಮೀಡಿಯಾ ಎಂಬ ಏಜೆನ್ಸಿಯನ್ನ ನಡೆಸುತ್ತಿರುವ ಸುಂಚಿಕಾ ಪಾಂಡೆ ಮುಂಬೈ ಪೊಲೀಸ್ ಇಲಾಖೆ ಹಾಗೂ ಬಿಎಂಸಿಯಂತಹ ಸರ್ಕಾರಿ ಇಲಾಖೆಯ ಸೋಶಿಯಲ್ ಮೀಡಿಯಾ ನಿರ್ವಹಣೆಯ ಜವಾಬ್ದಾರಿಯನ್ನ ಹೊತ್ತಿದ್ದಾರೆ. ಸುಂಚಿಕಾ ಕ್ರೈಮ್ ವಿಭಾಗದ ಮಾಜಿ ಪತ್ರಕರ್ತೆ ಕೂಡ ಹೌದು. ಕ್ರಿಯಾತ್ಮಕ ತಂಡವನ್ನ ಹೊಂದಿರುವ ಸುಂಚಿಕಾ ಮುಂಬೈ ಪೊಲೀಸರ ಸೋಶಿಯಲ್ ಮೀಡಿಯಾ ಖಾತೆಯನ್ನ ಸಖತ್ ಫೇಮಸ್ ಮಾಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಮುಂಬೈ ಪೊಲೀಸ್ ಇಲಾಖೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದೆ. ರಚನಾತ್ಮಾಕ ವಿಡಿಯೋಗಳನ್ನ ಹರಿಬಿಡೋದು ಜನರ ಕಮೆಂಟ್ಗಳಿಗೆ ಫನ್ನಿ ವಿಧಾನದಲ್ಲೇ ಕಾನೂನಿನ ಪಾಠ ಮಾಡುವ ಕೆಲಸ ಮಾಡ್ತಿದೆ. ಪೊಲೀಸರು ಅಂದರೆ ಭಯವಾಗುತ್ತೆ ಅನ್ನೋ ಮನೋಭಾವ ಈಗ ಹಳೆಯದಾಗಿದೆ. ಕಾಲ ಬದಲಾಗಿದೆ ಅಂತಾರೆ ಸುಂಚಿಕಾ ಪಾಂಡೆ..!
ಕಾನೂನಿನ ಪಾಲನೆಯಾಗುವಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದ್ದರಿಂದ ಅವರು ಜನರನ್ನ ಹೆದರಿಸಿ ಬೆದರಿಸ್ತಾರೆ ಎಂಬ ಗ್ರಹಿಕೆ ಹಿಂದಿನಿಂದಲೂ ಇತ್ತು. ಆದರೆ ಈ ಗ್ರಹಿಕೆಯು ಬದಲಾಗಬೇಕು ಅನ್ನೋದು ನನ್ನ ಅಭಿಪ್ರಾಯ. 2014ರ ಕಾಲದಲ್ಲಿ ನಾನು ಈ ಮಾತನ್ನ ಹೇಳುತ್ತಿದ್ದರೆ ಯಾರೂ ಒಪ್ಪುತ್ತಿರಲಿಲ್ಲವೇನೋ..! ಆದರೆ ಈಗ ಕಾಲ ಬದಲಾಗಿದೆ. ಪೊಲೀಸರೆಂದರೆ ಖಾಕಿ ಸಮವಸ್ತ್ರ ಧರಿಸಿರುವ ಮನುಷ್ಯರು ಅನ್ನೋದು ಜನರಿಗೂ ತಿಳಿದಿದೆ ಎಂದು ಸುಂಚಿಕಾ ಹೇಳಿದ್ದಾರೆ.