ಒಡಿಶಾದ ಪುರಿ ಬಳಿ ಇರುವ ರಘುರಾಜ್ಪುರ ಗ್ರಾಮವು ತನ್ನ ’ಪಟ್ಟಚಿತ್ರ’ ಕಲೆಯಿಂದ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ.
ರಾಜ್ಯದ ಪ್ರಮುಖ ಪ್ರವಾಸೀ ತಾಣಗಳಿಗೆ ಭೇಟಿ ಕೊಡುವ ಪ್ರವಾಸಿಗರು, ಈ ಕಲೆ ಝಲಕ್ ಒಂದನ್ನು ತಮ್ಮೊಂದಿಗೆ ನೆನಪಿಗೆ ಕೊಂಡೊಯ್ಯಲು ಈ ಊರಿಗೆ ಬರುತ್ತಾರೆ. ಪಟ್ಟ = ಬಟ್ಟೆ; ಚಿತ್ರ = ಕಲೆ, ಬಟ್ಟೆಯ ಮೇಲೆ ಮೂಡಿದ ಕಲೆಗೆ ’ಪಟ್ಟಚಿತ್ರ’ ಎಂದು ಕರೆಯಲಾಗುತ್ತದೆ. ಪೌರಾಣಿಕ ಕಥೆಗಳ ಅನೇಕ ಪ್ರಸಂಗಳನ್ನು ಬಟ್ಟೆಗಳ ಮೇಲೆ ಚಿತ್ರದ ರೂಪದಲ್ಲಿ ಬಿತ್ತರಿಸುವ ಪಟ್ಟಚಿತ್ರ ಕಲಾವಿದರ ಕೌಶಲ್ಯ ಭಾರೀ ನಾಜೂಕಾದದ್ಧು.
ಈ ಊರಿನಲ್ಲಿ ಹುಟ್ಟಿ ಬೆಳೆದ ಹುಡುಗರು ಚಾರ್ಟಡ್ ಅಕೌಂಟೆಂಟ್, ಸಂಚಾರೀ ಪೊಲೀಸ್ ಅಧಿಕಾರಿ, ಸ್ನಾತಕೋತ್ತರ ಪದವೀಧರರಾದರೂ ಸಹ ತಮ್ಮೂರಿನ ಗ್ರಾಮಸ್ಥರು ತಲೆಮಾರುಗಳಿಂದ ಉಳಿದುಕೊಂಡು ಬಂದ ಪಟ್ಟಚಿತ್ರ ಪರಂಪರೆಗೆ ತಮ್ಮದೇ ಆದ ಕೊಡುಗೆ ನೀಡುವ ಒಂದೇ ಒಂದು ಅವಕಾಶವನ್ನೂ ಬಿಡುವುದಿಲ್ಲ. ಈ ಕಾರಣದಿಂದ ಪಟ್ಟಚಿತ್ರ ಕಲೆಯ ಶ್ರೀಮಂತಿಕೆಯು 21ನೇ ಶತಮಾನದಲ್ಲೂ ತನ್ನ ಬೇರುಗಳನ್ನು ಗಟ್ಟಿಯಾಗಿ ಇಟ್ಟುಕೊಂಡಿದೆ.
ಊರಿನಲ್ಲಿ 160 ಮನೆಗಳಿದ್ದು, ಈ ಎಲ್ಲಾ ಮನೆಗಳಲ್ಲೂ ಸಹ ಪಟ್ಟಚಿತ್ರ ಕಲೆಯನ್ನು ಪೂಜ್ಯನೀಯ ಭಾವದಿಂದ ಸ್ವೀಕರಿಸಿದ್ದು, ಈ ಕಲೆಯನ್ನು ಸಂಪ್ರದಾಯವನ್ನಾಗಿ ಮಾಡಿಕೊಳ್ಳಲಾಗಿದೆ.
ಪಾರಂಪರಿಕ ಗ್ರಾಮವಾದ ರಘುರಾಜ್ಪುರದಲ್ಲಿ ಇನ್ನಷ್ಟು ಪ್ರವಾಸೀ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ, ಜಗತ್ತಿನ ಎಲ್ಲೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಈ ಊರಿಗೆ ಆಕರ್ಷಿಸಲು ಸರ್ಕಾರ ಯೋಜನೆಗಳನ್ನು ಹೊಂದಿದೆ ಎನ್ನುತ್ತಾರೆ ಒಡಿಶಾ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ವಿಶಾಲ್ ಕೆ ದೇವ್.