ಹಿಮಾಚಲ ಪ್ರದೇಶದ ತಿರ್ಥನ್ ಕಣಿವೆಯಲ್ಲಿ ಅಸಹಜವಾಗಿ ವರ್ತಿಸುತ್ತಿರುವ ಚಿರತೆಯೊಂದರ ವಿಡಿಯೋಗಳು ವೈರಲ್ ಆಗಿದ್ದು, ನೆಟ್ಟಿಗರನ್ನು ಚಕಿತಗೊಳಿಸಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಈ ಸಂಬಂಧ ಎರಡು ವಿಡಿಯೋ ಕ್ಲಿಪ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋಗಳಲ್ಲಿ ಚಿರತೆಯೊಂದು ಪ್ರವಾಸಿಗರ ಸುತ್ತ ಓಡಾಡುತ್ತಿದ್ದು, ಅವರೆಲ್ಲಾ ಗಾಬರಿಗೊಂಡಿರುವುದನ್ನು ನೋಡಬಹುದಾಗಿದೆ. ಆದರೆ ಚಿರತೆಯು ಬಹಳ ಕೂಲ್ ಆಗಿದ್ದು, ಕೆಲ ಯುವಕರೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದಾಗಿದೆ.
ಮತ್ತೊಂದು ವಿಡಿಯೋದಲ್ಲಿ ಇದೇ ಚಿರತೆ ಹಿರಿಯ ವ್ಯಕ್ತಿಯೊಬ್ಬರೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದಾಗಿದೆ. ಚಿರತೆಯ ಈ ಅಸಹಜ ವರ್ತನೆ ಸಾಕಷ್ಟು ಪ್ರಶ್ನೆಗಳನ್ನು ಎಬ್ಬಿಸಿದೆ. ಇದೇ ವೇಳೆ ಜನರ ವರ್ತನೆ ಕುರಿತಂತೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಭಾರತೀಯ ಅರಣ್ಯ ಸೇವೆಯ ಮತ್ತೊಬ್ಬ ಅಧಿಕಾರಿ ರಮೇಶ್ ಪಾಂಡೆ, “ಮರಿಯಾಗಿದ್ದಾಗಿನಿಂದ ಮಾನವರಿಂದ ಸಾಕಲ್ಪಟ್ಟ ಕಾಡು ಪ್ರಾಣಿಗಳು ಹೀಗೆ ವರ್ತಿಸುತ್ತವೆ. ವನ್ಯ ಜೀವಿಗಳನ್ನು ಸಾಕು ಪ್ರಾಣಿಗಳಂತೆ ಇಟ್ಟುಕೊಳ್ಳುವ ಟ್ರೆಂಡ್ ಬಹಳ ದುರದೃಷ್ಟಕರ ಹಾಗೂ ಚಿಂತಿಸಬೇಕಾದ ವಿಚಾರ” ಎಂದು ವಿವರಿಸಿದ್ದಾರೆ.