ದೇಶದಲ್ಲಿ ಬುಧವಾರ 70 ಸಾವಿರ ಹೊಸ ಕೊರೊನಾ ಕೇಸ್ಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 72,330 ಹೊಸ ಕೊರೊನಾ ಕೇಸ್ಗಳು ಹಾಗೂ 459 ಸಾವು ವರದಿಯಾಗಿದೆ. ಇದು ಡಿಸೆಂಬರ್ 5ರ ಬಳಿಕ ವರದಿಯಾದ ಅತಿ ಹೆಚ್ಚಿನ ಸಂಖ್ಯೆಯ ಕೇಸ್ ಆಗಿದೆ. ಇದರಲ್ಲಿ 39,544 ಕೇಸ್ಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಚತ್ತೀಸಗಢದಲ್ಲಿ ಇದೇ ಮೊದಲ ಬಾರಿಗೆ 4563 ಕೊರೊನಾ ಕೇಸ್ ದಾಖಲಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 4000 ಮಂದಿಯ ವರದಿ ಪಾಸಿಟಿವ್ ಬಂದಿದೆ.
ಕಳೆದ 24 ಗಂಟೆಗಳಲ್ಲಿ 459 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದು ಈ ಮೂಲಕ ದೇಶದಲ್ಲಿ ಒಟ್ಟು ಸಾವಿಗೀಡಾದವರ ಸಂಖ್ಯೆ 1,62,927 ಆಗಿದೆ. ದೇಶದಲ್ಲಿ ಪ್ರಸ್ತುತ 5,84,055 ಸಕ್ರಿಯ ಕೇಸ್ಗಳಿವೆ.
ಮಹಾರಾಷ್ಟ್ರದಲ್ಲಿ 243, ಪಂಜಾಬ್ನಲ್ಲಿ 55, ಚತ್ತೀಸಗಢದಲ್ಲಿ 39, ಕರ್ನಾಟಕದಲ್ಲಿ 26 ಹಾಗೂ ತಮಿಳುನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ 19 ಮಂದಿ ಕೊರೊನಾದಿಂದಾ ಸಾವಿಗೀಡಾಗಿದ್ದಾರೆ. 14 ರಾಜ್ಯಗಳಲ್ಲಿ ಬುಧವಾರ ಕೊರೊನಾ ಸಾವಿನ ವರದಿಯಾಗಿಲ್ಲ. ಬುಧವಾರ ದೇಶದಲ್ಲಿ 40382 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 1,14,74,683ಕ್ಕೆ ಏರಿಕೆಯಾಗಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನೀಡಿರುವ ಮಾಹಿತಿಯ ಪ್ರಕಾರ 31 ಮಾರ್ಚ್ವರೆಗೆ ದೇಶದಲ್ಲಿ ಒಟ್ಟು 24,47,98,621 ಸ್ಯಾಂಪಲ್ಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ, ಇದರಲ್ಲಿ 11,25,681 ಸ್ಯಾಂಪಲ್ಗಳನ್ನ ನಿನ್ನೆ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಇನ್ನು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಈವರೆಗೆ ಒಟ್ಟು 6,51,17,896 ಮಂದಿ ಕೊರೊನಾ ಲಸಿಕೆ ಪಡೆದಿದ್ದಾರೆ. ಇಂದಿನಿಂದ ಸರ್ಕಾರ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡುತ್ತಿದೆ.