ಕೊಲೆ ಆರೋಪವನ್ನ ಎದುರಿಸುತ್ತಿರುವ ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಆತನ ಆಪ್ತರು ಮತ್ತೊಬ್ಬ ಕುಸ್ತಿಪಟುವಿಗೆ ಕೋಲಿನಿಂದ ಹಲ್ಲೆ ನಡೆಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದ ಕುಸ್ತಿಪಟು ನೆಲದಲ್ಲಿ ಒದ್ದಾಡಿದ್ದು ತೀವ್ರ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾನೆ.
ಕಳೆದ ವಾರವಷ್ಟೇ ಸುಶೀಲ್ ಕುಮಾರ್ ಕೊಲೆ ಆರೋಪದಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದರು. ಛತ್ರಸಾಲಾ ಕ್ರೀಡಾಂಗಣದಲ್ಲಿ 23 ವರ್ಷದ ಸಾಗರ್ ಧಂಕರ್ ಎಂಬವರ ಮೇಲೆ ನಡೆದ ಹಲ್ಲೆ ಇದಾಗಿದ್ದು ಗಂಭೀರ ಗಾಯಗೊಂಡಿದ್ದ ಕುಸ್ತಿಪಟು ಸಾಗರ್ ಸಾವನ್ನಪ್ಪಿದ್ದರು.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸುಶೀಲ್ ಕುಮಾರ್ ಹಾಗೂ ಅವರ ಸ್ನೇಹಿತರು ಸಾಗರ್ ಮತ್ತು ಅವರ ಇಬ್ಬರು ಸ್ನೇಹಿತರ ಮೇಲೆ ದೆಹಲಿಯ ಛತ್ರಸಾಲಾ ಕ್ರೀಡಾಂಗಣದಲ್ಲಿ ಹಲ್ಲೆ ನಡೆಸಿದ್ದರು. ಗಾಯಗೊಂಡಿದ್ದ ಮೂವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾಗರ್ ಅಸುನೀಗಿದ್ದರು.
ಸುಶೀಲ್ ತನ್ನ ಸ್ನೇಹಿತ ಪ್ರಿನ್ಸ್ ಎಂಬಾತನ ಬಳಿ ಹಲ್ಲೆ ಮಾಡುತ್ತಿರುವ ದೃಶ್ಯವನ್ನ ವಿಡಿಯೋ ಮಾಡುವಂತೆ ಹೇಳಿದ್ದರಂತೆ. ಸುಶೀಲ್ ಹಾಗೂ ಆತನ ಸ್ನೇಹಿತರು ದೊಣ್ಣೆಗಳಿಂದ ಮೂವರನ್ನ ಅತ್ಯಂತ ಕ್ರೂರವಾಗಿ ಹಿಂಸಿಸಿದ್ದಾರೆ. ಈ ವಿಡಿಯೋ ಮೂಲಕ ಕುಸ್ತಿಪಟು ಸಮುದಾಯದಲ್ಲಿ ಎಲ್ಲರಲ್ಲೂ ಭಯ ಹುಟ್ಟಿಸೋದು ಸುಶೀಲ್ ಇರಾದೆಯಾಗಿತ್ತು ಎಂದು ಪೊಲೀಸರು ಕೋರ್ಟ್ಗೆ ಕಳೆದ ವಾರ ಮಾಹಿತಿ ನೀಡಿದ್ದರು. ಈ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಈಗಾಗಲೇ 8 ಮಂದಿಯನ್ನ ಬಂಧಿಸಿದ್ದಾರೆ.