ಯೋಗ ಗುರು ಬಾಬಾ ರಾಮದೇವ್ ಹಾಗೂ ಭಾರತೀಯ ವೈದ್ಯಕೀಯ ಸಂಘದ ನಡುವಿನ ವಿವಾದ ದಿನಕ್ಕೊಂದು ಟ್ವಿಸ್ಟ್ ಪಡೀತಾನೇ ಇದೆ. ಪತಂಜಲಿ ಔಷಧಿಗಳನ್ನ ಅಲೋಪಥಿ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದೆ ಎಂಬ ಬಾಬಾ ರಾಮದೇವ್ರ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಭಾರತೀಯ ವೈದ್ಯಕೀಯ ಸಂಘ ಈ ಕುರಿತು ಬಹಿರಂಗ ಚರ್ಚೆ ಆಹ್ವಾನ ನೀಡಿದೆ.
ಅಲೋಪಥಿ ಚಿಕಿತ್ಸೆಯ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಭಾರತೀಯ ವೈದ್ಯಕೀಯ ಸಂಘ ಈಗಾಗಲೇ ಈ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮಾತ್ರವಲ್ಲದೇ ಪ್ರಧಾನಿ ಮೋದಿಯವರಿಗೂ ಪತ್ರ ಬರೆದಿರುವ ಐಎಂಎ ಕೊರೊನಾ ಲಸಿಕೆ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿರುವ ಬಾಬಾ ರಾಮದೇವ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಹೇಳಿತ್ತು.
ರಾಮದೇವ್ ವಿರುದ್ಧ ಪ್ರಕರಣ ದಾಖಲಿಸಿರುವ ಐಎಂಎ ದೂರಿನ ಪ್ರತಿಯಲ್ಲಿ : ಕೋವಿಡ್ ಪರಿಸ್ಥಿತಿಯ ಲಾಭವನ್ನ ಪಡೆಯಲು ಯತ್ನಿಸುತ್ತಿರುವ ಬಾಬಾ ರಾಮ್ದೇವ್ ಅಲೋಪಥಿ ಚಿಕಿತ್ಸಾ ವಿಧಾನದ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ದೂರಿತ್ತು.
ಐಎಂಎ ನೀಡಿರುವ ದೂರನ್ನ ಸ್ವೀಕರಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.