ʼಕೋವಿಡ್ʼ ಸೋಂಕಿತರ ಕುಟುಂಬಕ್ಕೆ ನೆರವಾದ ಚಾಲಕ 25-05-2021 11:10AM IST / No Comments / Posted In: Latest News, India ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮಿತಿಮೀರಿದೆ. ಸಾಕಷ್ಟು ಸವಾಲುಗಳನ್ನ ವೈದ್ಯಕೀಯ ಲೋಕ ಎದುರಿಸುತ್ತಿರುವ ನಡುವೆಯೇ ಕೆಲ ಮಹಾನುಭಾವರು ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗುತ್ತಿದ್ದಾರೆ. ಇದೇ ರೀತಿ ಊಬರ್ ಚಾಲಕ ಕೂಡ ವೃದ್ಧ ಕೋವಿಡ್ ಸೋಂಕಿತೆಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ರಿತುಪರ್ಣ ಚಟರ್ಜಿ ಟ್ವಿಟರ್ನಲ್ಲಿ ಈ ವಿಚಾರವನ್ನ ಶೇರ್ ಮಾಡಿದ್ದು ಉದಿತ್ ಅಗರ್ವಾಲ್ ಎಂಬ ಊಬರ್ ಚಾಲಕ ಹೇಗೆ ತನ್ನ ತಾಯಿಯ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ರು ಎಂಬ ವಿಚಾರವನ್ನ ಹಂಚಿಕೊಂಡಿದ್ದಾರೆ. ಕೋವಿಡ್ ಸೋಂಕಿತೆಯಾಗಿದ್ದ ನನ್ನ ತಾಯಿಗೆ ಆಸ್ಪತ್ರೆಗೆ ಸೇರಬೇಕಾದ ಅನಿವಾರ್ಯತೆ ಎದುರಾಗಿತ್ತು. ಆಕೆಯ ಆಕ್ಸಿಜನ್ ಮಟ್ಟ 80ಕ್ಕೆ ಇಳಿಕೆಯಾದ್ದರಿಂದ ನನ್ನ ಸ್ನೇಹಿತರು ಆಸ್ಪತ್ರೆಯೊಂದರಲ್ಲಿ ಬೆಡ್ ಹುಡುಕಿದ್ದರು. ನಮ್ಮ ಬಳಿ ಕೇವಲ ಒಂದು ಆಕ್ಸಿಜನ್ ಸಿಲಿಂಡರ್ ಮಾತ್ರ ಬಾಕಿ ಉಳಿದಿತ್ತು. ಹೀಗಾಗಿ ನಾವು ಆಕೆಯನ್ನ ಆಸ್ಪತ್ರೆಗೆ ಸೇರಿಸಲೇಬೇಕಿತ್ತು. ಎಷ್ಟು ಪ್ರಯತ್ನಿಸಿದರೂ ನಮಗೆ ಆಂಬುಲೆನ್ಸ್ ಸೇವೆ ದೊರಕಲಿಲ್ಲ. ನನ್ನ ತಾಯಿಯಂತೂ ಬದುಕುವ ಆಸೆಯನ್ನೇ ಬಿಟ್ಟಿದ್ದರು. ಈ ವೇಳೆಗೆ ನಾನು ಊಬರ್ನಲ್ಲಿ ಕಾರನ್ನ ಬುಕ್ ಮಾಡಲು ನಿರ್ಧರಿಸಿದೆ. ಸಾಕಷ್ಟು ಪ್ರಯತ್ನಗಳ ಬಳಿಕ ಅರ್ಗವಾಲ್ ನಮಗೆ ಸಿಕ್ಕಿದ್ರು. ನನಗೆ ಹಾಗೂ ನನ್ನ ತಾಯಿಗೆ ಕೋವಿಡ್ ಪಾಸಿಟಿವ್ ಇದೆ ಎಂದು ತಿಳಿದಿದ್ದರೂ ಸಹ 40 ಕಿಮೀ ದೂರದ ಆಸ್ಪತ್ರೆಗೆ ನಮ್ಮನ್ನ ಸುರಕ್ಷಿತವಾಗಿ ತಲುಪಿಸಿದ್ರು. ಬರೋಬ್ಬರಿ ನಾಲ್ಕು ಗಂಟೆಗಳು ಅಗರ್ವಾಲ್ ನಮ್ಮ ಜೊತೆಯಲ್ಲೇ ಇದ್ದರು. ನಾನು ಆಸ್ಪತ್ರೆಯ ವಿವಿಧ ಕೆಲಸಗಳಲ್ಲಿ ಬ್ಯುಸಿ ಇದ್ದಾಗ ಅವರೇ ನನ್ನ ತಾಯಿಗೆ ನೀರು ತಂದುಕೊಡೋದು ಸೇರಿದಂತೆ ವಿವಿಧ ಆರೈಕೆ ಮಾಡುತ್ತಲೇ ಇದ್ದರು. ಮಾರನೇ ದಿನ ನನ್ನ ತಾಯಿಗೆ ಇನ್ನೊಂದು ಆಸ್ಪತ್ರೆಗೆ ಶಿಫ್ಟ್ ಆಗುವಾಗಲೂ ಇದೇ ಅಗರ್ವಾಲ್ ನಮ್ಮ ಸಹಾಯಕ್ಕೆ ನಿಂತಿದ್ದರು ಎಂದು ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಊಬರ್ ಚಾಲಕನ ಮಾನವೀಯತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.