29 ವರ್ಷದ ತುಂಬು ಗರ್ಭಿಣಿಯನ್ನ ಪತಿ ಕೊಲೆ ಮಾಡಿದ ದಾರುಣ ಘಟನೆ ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ 34 ವರ್ಷದ ಪತಿ ಮೊಹಮ್ಮದ್ ವಾಸಿಮ್ ಬಂಧನವಾಗಿದೆ.
ಈತನ ವಿರುದ್ಧ ಗರ್ಭಿಣಿ ಪತ್ನಿ ಶೈನಾಳನ್ನ ಕೊಲೆ ಮಾಡಿದ್ದು ಮಾತ್ರವಲ್ಲದೇ ಆಕೆಯ ಸಹಾಯಕ್ಕೆ ಬಂದ ಶಹಾದತ್ ಮೇಲೆ ಹಲ್ಲೆ ನಡೆಸಿದ ಆರೋಪವೂ ಇದೆ. ಶಹಾದತ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಶೈನಾ ವಾಸಿಮ್ ಜೊತೆ ನಾಲ್ಕನೇ ವಿವಾಹವಾಗಿದ್ದಳು. ಈಕೆಯ ವಿರುದ್ಧ ಮಾದಕ ದ್ರವ್ಯ ಸಾಗಣೆ ಆರೋಪವಿದ್ದುದರಿಂದ ಪೊಲೀಸರು ಬಂಧಿಸಿದ್ದರು. ಈ ನಡುವೆ ವಾಸಿಮ್ ಶೈನಾಳ ಸಹೋದರಿ ರಿಹಾನಾಳ ಜೊತೆ ಲವ್ವಿ ಡವ್ವಿ ಶುರು ಮಾಡಿದ್ದ. ಶೈನಾ ಗರ್ಭಿಣಿಯಾಗಿದ್ದ ಹಿನ್ನೆಲೆ ಜಾಮೀನಿನ ಮೂಲಕ ಬಿಡುಗಡೆ ಮಾಡಲಾಗಿತ್ತು.
ಜೈಲಿನಿಂದ ಹೊರಬಂದ ಶೈನಾಳನ್ನ ಸಂಪರ್ಕಿಸುವ ಯಾವುದೇ ಪ್ರಯತ್ನವನ್ನ ವಾಸೀಂ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಶೈನಾ ತನ್ನ ಮೂರನೇ ಪತಿ ಗ್ಯಾಂಗ್ಸ್ಟರ್ ಶರಾಫತ್ನಿಂದ ನಿನಗೆ ಪಾಠ ಕಲಿಸುತ್ತೇನೆ ಎಂಧು ಧಮ್ಕಿ ಹಾಕಿದ್ದಳು. ಎರಡು ಪಿಸ್ತೂಲ್ಗಳ ಜೊತೆ ಆಕೆಯ ಮನೆಗೆ ಬಂದ ವಾಸೀಂ ಎಲ್ಲರ ಎದುರಲ್ಲೇ ಶೈನಾಳ ಮೇಲೆ ಗುಂಡು ಹಾರಿಸಿದ್ದ.
ಶೈನಾಳ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಕೊಲೆಯ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಈತನ ಫೈರಿಂಗ್ಗೆ ಶೈನಾ ಕೊಲೆಯಾಗಿದ್ದರೆ ಶಹಾದತ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.