ದೇಶದಲ್ಲಿ ಕೊರೊನಾ ಲಸಿಕೆಗಳ ಅಭಾವದ ಬಗ್ಗೆ ಹೆಚ್ಚು ವರದಿಯಾಗುತ್ತಿರುವ ಬೆನ್ನಲ್ಲೆ ಆರ್ಟಿಐ ಅರ್ಜಿಯೊಂದು ಜನವರಿ ಮಧ್ಯಂತರದಿಂದ ಆರಂಭವಾದ ಕೊರೊನಾ ಲಸಿಕೆಯ ಅಭಿಯಾನದಿಂದ ಇಲ್ಲಿಯವರೆಗೆ ವ್ಯರ್ಥವಾದ ಕೊರೊನಾ ಲಸಿಕೆಗಳ ದತ್ತಾಂಶ ನೀಡಿದೆ.
ಆರ್ಟಿಐ ಅರ್ಜಿಗೆ ನೀಡಲಾದ ಉತ್ತರದಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 12.10 ಪ್ರತಿಶತ ಲಸಿಕೆ ವ್ಯರ್ಥ ಮಾಡಲಾಗಿದೆ. ಎರಡನೇ ಸ್ಥಾನದಲ್ಲಿ 9.74 ಪ್ರತಿಶತ ಲಸಿಕೆ ವ್ಯರ್ಥ ಮಾಡುವ ಮೂಲಕ ಹರಿಯಾಣ ಇದೆ. ಇನ್ನು ಪಂಜಾಬ್ (8.12%), ಮಣಿಪುರ (7.8%) ಹಾಗೂ ತೆಲಂಗಾಣ (7.55%) ಕ್ರಮವಾಗಿ ಮುಂದಿನ ಸ್ಥಾನಗಳನ್ನ ಪಡೆದುಕೊಂಡಿವೆ.
ಏಪ್ರಿಲ್ 11ರವರೆಗೆ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ ದೇಶದಲ್ಲಿ 10 ಕೋಟಿ ಡೋಸ್ಗಳನ್ನ ಬಳಕೆ ಮಾಡಲಾಗಿದ್ದು ಇದರಲ್ಲಿ 44 ಲಕ್ಷ ಡೋಸ್ ವ್ಯರ್ಥವಾಗಿದೆ ಎಂದು ತಿಳಿದುಬಂದಿದೆ.
ಇನ್ನು ಕಡಿಮೆ ಪ್ರಮಾಣದಲ್ಲಿ ಲಸಿಕೆಯನ್ನ ವ್ಯರ್ಥ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ಕೇರಳ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೊರಾಂ, ಗೋವಾ, ದಿಯು & ದಮನ್, ಅಂಡಮಾನ್ ಹಾಗೂ ನಿಕೋಬಾರ್ ಮತ್ತು ಲಕ್ಷದ್ವೀಪಗಳು ಸ್ಥಾನ ಪಡೆದಿದೆ. ಈ ರಾಜ್ಯಗಳಲ್ಲಿ ಶೂನ್ಯ ಪ್ರತಿಶತ ಲಸಿಕೆ ವ್ಯರ್ಥವಾಗಿದೆ.
ಕೊರೊನಾ ಲಸಿಕೆ ಅಭಾವವು ವಿವಿಧ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಮಹಾರಾಷ್ಟ್ರ, ಪಂಜಾಬ್, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳು ಜನಸಂಖ್ಯೆಗಿಂತ ಕಡಿಮೆ ಪ್ರಮಾಣದಲ್ಲಿ ಲಸಿಕೆ ಸಂಗ್ರಹವಿದೆ ಎಂದು ಹೇಳಿದ್ದವು.