ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಪಾಪ್ ತಾರೆ ರಿಹನ್ನಾ ಟ್ವೀಟ್ ಮಾಡುತ್ತಿದ್ದಂತೆಯೇ ಪ್ರತಿಭಟನೆ ಬೇರೆ ದಿಕ್ಕಿಗೇ ವಾಲಿದೆ. ಇಷ್ಟು ದಿನ ತುಟಿ ಬಿಚ್ಚದೇ ಸುಮ್ಮನ್ನಿದ್ದ ಭಾರತೀಯ ಸೆಲೆಬ್ರಿಟಿಗಳು ದೇಶ ಒಂದು ಎಂಬ ಸಂದೇಶ ಸಾರಿದ್ದಾರೆ. ಈ ಸಾಲಿಗೆ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಒಬ್ಬರು. ಇದೇ ವಿಚಾರವಾಗಿ ಕೋಪಗೊಂಡಿದ್ದ ವ್ಯಕ್ತಿಯೊಬ್ಬ 15 ನಿಮಿಷಗಳ ಕಾಲ ಮುಂಬೈನಲ್ಲಿ ಅಜಯ್ ದೇವಗನ್ರ ಕಾರನ್ನ ತಡೆದಿದ್ದಾನ.
ವೈರಲ್ ಆಗಿರುವ ವಿಡಿಯೋದಲ್ಲಿ ಕಾರಿಗೆ ತಡೆ ನೀಡಿದ ವ್ಯಕ್ತಿ ಅಜಯ್ ದೇವಗನ್ ಪಂಜಾಬ್ ವಿರೋಧಿಯಾಗಿದ್ದಾರೆ ಎಂದು ಹೇಳೋದನ್ನ ಕೇಳಬಹುದಾಗಿದೆ. ಬಿಎಂಡಬ್ಲೂ ಕಾರಿನ ಮುಂಬದಿ ಸೀಟಿನಲ್ಲಿ ಕುಳಿತಿದ್ದ ಅಜಯ್ ದೇವಗನ್ ಕೆಲಕಾಲ ಕಸಿವಿಸಿಗೊಳಗಾಗಿದ್ದಾರೆ. ಗೊರೆಗಾಂವ್ನ ಫಿಲಂಸಿಟಿ ಮುಂಭಾಗದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ.
ಈ ವ್ಯಕ್ತಿ ಪಂಜಾಬ್ಗೆ ವಿರೋಧಿಯಾಗಿದ್ದಾರೆ. ಪಂಜಾಬ್ ಇವರಿಗೆ ಅನ್ನ ನೀಡಿದೆ. ಅದು ಹೇಗೆ ತಿಂದಿದ್ದು ಜೀರ್ಣವಾಗುತ್ತೆ..? ನೀವು ಹೇಗೆ ಪಂಜಾಬ್ ವಿರೋಧಿ ಆಗೋಕೆ ಸಾಧ್ಯ..? ನಿಮಗೆ ನಾಚಿಕೆಯಾಗಬೇಕು. ನೀವೇಕೆ ಕಾರಿನಿಂದ ಇಳಿದು ಬಂದು ನನ್ನೊಂದಿಗೆ ಮಾತನಾಡಬಾರದು ಎಂದು ಪ್ರಶ್ನೆ ಮಾಡಿದ್ದಾನೆ.
ಅಜಯ್ ದೇವಗನ್ ಜೊತೆಗಿದ್ದ ಭದ್ರಾ ಸಿಬ್ಬಂದಿ ಆ ವ್ಯಕ್ತಿಯೊಂದಿಗೆ ಮಾತನಾಡಲು ಯತ್ನಿಸಿದ್ದಾರೆ. ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.