ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ್ದರೂ ಸಹ ರಾಜಕೀಯ ಚಟುವಟಿಕೆಗಳು ನಿಂತಿಲ್ಲ. ಅಧಿಕಾರದ ಸಲುವಾಗಿ ತಂತ್ರ-ಪ್ರತಿತಂತ್ರ ಮುಂದುವರಿಯುತ್ತಲೇ ಇವೆ.
ರಾಜ್ಯಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ಈಗ ರಾಜಕೀಯ ಚಟುವಟಿಕೆ ಮತ್ತಷ್ಟು ಗರಿಗೆದರಿದ್ದು, ಗುಜರಾತಿನಲ್ಲಿ ಮೂವರು ‘ಕೈ’ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಆಡಳಿತರೂಢ ಬಿಜೆಪಿಗೆ ಅನುಕೂಲಕರವಾಗಲಿದೆ ಎನ್ನಲಾಗಿದ್ದು, ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷ ಬೆಚ್ಚಿಬಿದ್ದಿದೆ.
ಇನ್ನಷ್ಟು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಕ್ಷಣಾ ತಂತ್ರಕ್ಕೆ ಮೊರೆ ಹೋಗಿರುವ ಗುಜರಾತಿನ ಕಾಂಗ್ರೆಸ್ ಘಟಕ, ತನ್ನ 21 ಶಾಸಕರನ್ನು ಶನಿವಾರ ರಾತ್ರಿಯೇ ರಾಜಸ್ಥಾನದ ಅಬು ರಸ್ತೆಯ ಅಂಬಾಜಿ ಟೆಂಪಲ್ ಸಮೀಪದ ಖಾಸಗಿ ರೆಸಾರ್ಟ್ ಗೆ ಕಳುಹಿಸಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಈ ಶಾಸಕರುಗಳು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.