ನವದೆಹಲಿ: ಈಗಷ್ಟೇ ಪ್ರಪಂಚಕ್ಕೆ ಬಂದು ಕಣ್ಬಿಟ್ಟು ನೋಡುತ್ತಿರುವ ನವಜಾತ ಶಿಶುಗಳನ್ನೂ ಬೆಂಬಿಡದೆ ಕಾಡುತ್ತಿದೆ ಕೊರೊನಾ ಮಹಾಮಾರಿ. ಇಂತಹ ಕ್ರೂರಿ ಕೊರೊನಾ ಸೋಂಕನ್ನೇ ಗೆದ್ದು ಬಂದಿದೆ 23 ದಿನಗಳ ಮುದ್ದು ಕಂದಮ್ಮ.
ಹೌದು. ಹುಟ್ಟಿದ 8 ದಿನಕ್ಕೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಉತ್ತರ ಪ್ರದೇಶದ ಘಾಜಿಯಾಬಾದ್ ನ ನವಜಾತ ಶಿಶು ಬರೋಬ್ಬರಿ 15 ದಿನಗಳ ಸತತ ಚಿಕಿತ್ಸೆ ಬಳಿಕ ಇದೀಗ ಕೊರೊನಾ ಸೋಂಕು ಗೆದ್ದು ಬಂದಿದೆ.
ಮನಸ್ಸಿಗೆ ಮುದ ನೀಡುತ್ತೆ ಪುಟ್ಟ ಬಾಲಕನ ಈ ಮುದ್ದಾದ ಹಾಡು..!
ಮಗು ಹುಟ್ಟುವ ಮೊದಲು ತಾಯಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಆದರೆ ಅವರಿಗೆ ಸೋಂಕು ಇರಲಿಲ್ಲ. ಹೆರಿಗೆ ಬಳಿಕ ತಾಯಿ 8 ದಿನದ ಮಗುವಿನೊಂದಿಗೆ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಅಷ್ಟೊತ್ತಿಗಾಗಲೇ ತಾಯಿಗೆ ಸೋಂಕು ತಗುಲಿತ್ತು. ಹೀಗಾಗಿ ಪುಟ್ಟ ಕಂದ ಕೂಡ ಕೊರೊನಾ ಸೋಂಕಿಗೆ ಒಳಗಾಗಿತ್ತು.
ನವಜಾತ ಶಿಶುವನ್ನು 15 ದಿನಗಳ ಕಾಲ ವೈದ್ಯರ ನಿಗಾದಲ್ಲಿರಿಸಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಮಗುವಿನ ವರದಿಯಲ್ಲಿ ನೆಗೆಟಿವ್ ಬಂದಿದೆ. ಕೇವಲ 23 ದಿನಗಳ ಕಂದಮ್ಮ ಕೋವಿಡ್ ವೈರಸ್ ಗೆದ್ದು ಬಂದಿದ್ದು, ವೈದ್ಯರು, ಕುಟುಂಬ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.