ಪುಣೆಯ ಆಘಾಖಾನ್ ಅರಮನೆ ಹಾಗೂ ಮುಂಬಯಿಯ ಪಾಮ್ ಬನ್ ಹೌಸ್‌ನಲ್ಲಿ 1942-1944ರ ನಡುವಿನ ಅವಧಿಯಲ್ಲಿ ಕಾಲ ಕಳೆದಿದ್ದ ವೇಳೆ ಮಹಾತ್ಮಾ ಗಾಂಧಿಯವರು ಬಳಸಿದ್ದ ಪಾತ್ರೆ ಹಾಗೂ ಇತರೆ ಸಾಮಾನುಗಳನ್ನು ಬ್ರಿಟನ್‌ನ ಬ್ರಿಸ್ಟಾಲ್‌ನಲ್ಲಿ ಹರಾಜಿಗೆ ಇಡಲಾಗಿದೆ.
ಜನವರಿ 10ರಂದು ನಡೆಯಲಿರುವ ಈ ಹರಾಜಿನಲ್ಲಿ ಹರಾಜಿಗೆ ಒಳಗಾಗಲಿರುವ ಪಾತ್ರೆಗಳ ಆರಂಭಿಕ ಬೆಲೆ 55 ಸಾವಿರ ಪೌಂಡ್‌ಗಳಷ್ಟು ಇದ್ದು, ಇದು 54,57,810 ರೂ.ಗಳಷ್ಟಾಗುತ್ತದೆ. ಈ ಆಂಟಿಕ್ ಪದಾರ್ಥಗಳನ್ನು ಭಾರತಕ್ಕೆ ತರುವ ಯೋಜನೆ ಇದ್ದಲ್ಲಿ, ಜಿಎಸ್‌ಟಿ, ವಿಮೆ, ಆಮದು ಸುಂಕ, ಸಾಗಾಟದ ವೆಚ್ಚ ಸೇರಿ ಏನಿಲ್ಲವೆಂದರೂ 1.2 ಕೋಟಿ ರೂ.ಗಳಷ್ಟು ಖರ್ಚಾಗಲಿದೆ.
ಈ ಪಾತ್ರೆಗಳ ಪೈಕಿ ಸಣ್ಣದೊಂದು ಲೋಹದ ಬಟ್ಟಲು, ಎರಡು ಮರದ ಚಮಚಗಳು ಮತ್ತು ಫೋರ್ಕ್. ಆಘಾಖಾನ್ ಅರಮನೆಯಲ್ಲಿ ಇದ್ದ ಗಾಂಧಿ ಇದೇ ವೇಳೆ ಮುಂಬಯಿಯಲ್ಲಿ ತಮ್ಮ ಸ್ನೇಹಿತ ನರೋತ್ತಮ್ ಮೊರಾರ್ಜಿ ಅವರ ಪಾಮ್ ಬನ್ ಬಂಗಲೆಯಲ್ಲಿ ಒಂದಷ್ಟು ದಿನ ಕಳೆದಿದ್ದರು.