ದಕ್ಷಿಣ ಭಾರತದ ಆಹಾರ ಪದ್ಧತಿಗೆ ಸರಿ ಸಾಟಿ ಬೇರೊಂದಿಲ್ಲ. ದಕ್ಷಿಣ ಭಾರತದ ಪಾಕ ಪದ್ಧತಿಯಲ್ಲಿ ಎಷ್ಟೊಂದು ತಿನಿಸುಗಳು ಸೇರಿವೆ ಅಂದರೆ ನಿಮಗೆ ಯಾವುದೋ ಒಂದನ್ನ ಆಯ್ಕೆ ಮಾಡಿಕೊಳ್ಳೋದು ಕಷ್ಟ ಎನಿಸಬಹುದು. ಇಡ್ಲಿ – ಸಾಂಬಾರ್, ವಡಾ, ಬಿಸಿಬೆಳೆ ಬಾತ್, ದೋಸೆ, ಮೈಸೂರ್ ಪಾಕ್, ಮೈಸೂರು ಮಸಾಲಾ ಹೀಗೆ ತಿನಿಸುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ.
ದೋಸೆ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿಂಡಿಗಳಲ್ಲೊಂದು. ದಕ್ಷಿಣ ಭಾರತದ ಯಾವುದೇ ಗಲ್ಲಿಗೆ ಹೋದರೂ ದೋಸೆ ಸಿಗುವ ಹೋಟೆಲ್ ಇಲ್ಲವೇ ಕ್ಯಾಂಟೀನ್ ಸಿಕ್ಕೇ ಸಿಗುತ್ತದೆ. ಆದರೆ ನೀವೇನಾದರೂ ಮುಂಬೈನಲ್ಲಿದ್ದು ಸಖತ್ ಆಗಿರುವ ದೋಸೆಯನ್ನ ಟೇಸ್ಟ್ ಮಾಡಬೇಕು ಅಂತಾ ಬಯಸಿದ್ದರೆ ಕಲ್ಬಾದೇವಿಯಲ್ಲಿರುವ ಈ ವಿಶೇಷ ಸ್ಥಳಕ್ಕೆ ಭೇಟಿ ನೀಡಲೇಬೇಕು.
ದಕ್ಷಿಣ ಮುಂಬೈನ ಮಂಗಲ್ ದಾಸ್ ಮಾರ್ಕೆಟ್ನಲ್ಲಿರುವ ಶ್ರೀ ಬಾಲಾಜಿ ದೋಸಾ ಸೆಂಟರ್ನಲ್ಲಿ ನಿಮಗೆ ಹಾರುವ ದೋಸಾ ಸಿಗಲಿದೆ. ತರಹೇವಾರಿ ದೋಸೆಗಳಿಗಾಗಿಯೇ ಈ ಫುಡ್ ಸ್ಟಾಲ್ ಅತ್ಯಂತ ಫೇಮಸ್ ಆಗಿದೆ. ದೋಸೆಗಳ ಜೊತೆಯಲ್ಲಿ ಇಲ್ಲಿ ದೋಸೆಯನ್ನ ಬಡಿಸುವ ರೀತಿಯೂ ಸಖತ್ ಡಿಫರೆಂಟ್.
ಇಲ್ಲಿ ದೋಸೆ ಹಂಚಿನಿಂದ ನೇರವಾಗಿ ತಟ್ಟೆಗೆ ದೋಸೆ ಬೀಳುತ್ತೆ. ಫೇಸ್ಬುಕ್ನಲ್ಲಿ ಶೇರ್ ಮಾಡಲಾದ ವಿಡಿಯೋವೊಂದರಲ್ಲಿ ದೋಸೆಯನ್ನ ಗಾಳಿಯಲ್ಲಿ ತೇಲಿ ಬಿಡಲಾಗಿದೆ ಹಾಗೂ ಅದು ನೇರವಾಗಿ ತಟ್ಟೆಗೆ ಬಂದು ಬಿದ್ದಿದೆ. ಸಖತ್ ಡಿಫರೆಂಟ್ ಆಗಿ ದೋಸೆಯನ್ನ ಬಡಿಸುವ ಈ ರೀತಿ ನಿಮಗೆ ಆಶ್ಚರ್ಯ ಉಂಟು ಮಾಡೋದ್ರಲ್ಲಿ ಸಂದೇಹವೇ ಇಲ್ಲ. ಅಂದಹಾಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
https://www.facebook.com/street.food.videos/videos/257203489362356/?t=11