ಹಳ್ಳಿಗಳಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಅಕ್ಕ ಪಕ್ಕದ ಮನೆಯ ನಡುವೆ ಗಲಾಟೆಗಳು ನಡೆಯೋದು ಕಾಮನ್. ಆದರೆ ಆಗ್ರಾದ ಹಳ್ಳಿಯೊಂದರಲ್ಲಿ ಮೇಕೆ ವಿಚಾರವಾಗಿ ನಡೆದ ಜಗಳವೊಂದು ತಂದೆ ಹಾಗೂ ಮಗನ ಕೊಲೆಯಲ್ಲಿ ಅಂತ್ಯವಾಗಿದೆ.
ಭೀಕಂ ಸಿಂಗ್ ಎಂಬವರಿಗೆ ಸೇರಿದ ಮೇಕೆ ಗ್ಯಾನಿ ಎಂಬವರ ಮನೆಗೆ ಪ್ರವೇಶಿಸಿದೆ. ಯಾರೋ ಮೇಕೆಗೆ ಕೋಲಿನಿಂದ ಹೊಡೆದು ಅದರ ಕಾಲನ್ನ ಮುರಿದಿದ್ದರು. ಇದು ಮೇಕೆ ಮಾಲೀಕರ ಮನೆಯವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಜಗಳ ತಾರಕ್ಕೇರುತ್ತಿದ್ದಂತೆಯೇ ಗ್ಯಾನಿ ಪಿಸ್ತೂಲ್ನಿಂದ 20 ವರ್ಷದ ಜೀತೇಂದ್ರ ಹಾಗೂ ಆತನ ತಂದೆ ಭೀಕಂ ಸಿಂಗ್ ಮೇಲೆ ಗುಂಡು ಹಾರಿಸಿದ್ದಾನೆ.
ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಬಸೌನಿ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಅವಳಿ ಕೊಲೆ ಆರೋಪಿ ಗ್ಯಾನಿ ಪರಾರಿಯಾಗಿದ್ದು ಬಸೌನಿ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.