ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪ್ರವೇಶಾತಿಗಾಗಿ ನಡೆದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ ನಲ್ಲಿ ರೈತನ ಮಗನೊಬ್ಬ ತೇರ್ಗಡೆ ಹೊಂದುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ಅಹಮದಾಬಾದಿನ ನವಿ ಅಖೋಲ ಎಂಬಲ್ಲಿ ಕೃಷಿಕರಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬದಲ್ಲಿ ಜನಿಸಿದ ವಿಜಯ್ ಮಕ್ವಾನಾ ಎಂಬ 18 ವರ್ಷದ ಯುವಕನ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ 1,849 ನೇ ರ್ಯಾಂಕ್ ಪಡೆದಿದ್ದು, ರೋರ್ಕಿ ಅಥವಾ ಖರಗ್ಪುರದ ಐಐಟಿಯಲ್ಲಿ ಕಂಪ್ಯೂಟರ್ ಅಥವಾ ಮೆಕ್ಯಾನಿಕಲ್ ಗೆ ಪ್ರವೇಶ ಬಯಸುವುದಾಗಿ ಹೇಳಿದ್ದಾನೆ.
ಸ್ನಾತಕೋತ್ತರ ಪಡೆಯಬೇಕು ಎಂಬ ಆಸೆ ಇದೆ. ಆದರೆ, ಬಿಟೆಕ್ ಮುಗಿದ ತಕ್ಷಣ ಮೊದಲು ಕೆಲಸ ಹುಡುಕುತ್ತೇನೆ. ಅಪ್ಪನ ವಾರ್ಷಿಕ ಆದಾಯವೇ 50 ಸಾವಿರ ರೂಪಾಯಿ. ಶಿಕ್ಷಣದಿಂದಲೇ ಬಡತನ ನಿವಾರಣೆ ನಂಬಿದ್ದಾರೆ. ಐಐಟಿ ಸೇರುವ ನನ್ನ ಕನಸು ನನಸಾಗಿಸಿದ್ದಾರೆ. ಆದರೆ, ಮೂರು ಮಕ್ಕಳ ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳುವುದು ಅಷ್ಟು ಸುಲಭವಿಲ್ಲ. ಗುಜರಾತ್ ಸರ್ಕಾರದ ವಿದ್ಯಾರ್ಥಿ ವೇತನದ ಯೋಜನೆಯಡಿ ಅಣ್ಣನೂ ಅಹಮದಾಬಾದಿನ ಇಂಡಸ್ ವಿವಿಯಿಂದ ಎಂಟೆಕ್ ಪೂರ್ಣಗೊಳಿಸಿದ್ದಾನೆ. ನಾನಿನ್ನು ಬಿಟೆಕ್ ಮುಗಿಸಿ ಕೆಲಸಕ್ಕೆ ಸೇರಿ ನಂತರ ಎಂಟೆಕ್ ನತ್ತ ಗಮನ ಹರಿಸುತ್ತೇನೆ ಎಂದಿದ್ದಾನೆ.