ಆಗ್ರಾದ ಕಾಲೇಜೊಂದು ಹೊರಡಿಸಿದೆ ಎನ್ನಲಾದ ವ್ಯಾಲಂಟೈನ್ ಡೇ ಸಂಬಂಧಿ ನೋಟಿಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸೇಂಟ್ ಜಾನ್ಸ್ ಕಾಲೇಜು ಆಗ್ರಾಗೆ ಸೇರಿದ್ದು ಎನ್ನಲಾದ ಈ ನೋಟಿಸ್ನಲ್ಲಿ , ಫೆಬ್ರವರಿ 14ನೇ ತಾರೀಖಿನಂದು ಕಾಲೇಜಿನ ಪ್ರತಿ ವಿದ್ಯಾರ್ಥಿನಿ ಕನಿಷ್ಟ ಒಂದಾದರೂ ಬಾಯ್ ಫ್ರೆಂಡ್ನ್ನು ಹೊಂದಿರಬೇಕು ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ ಈ ನೋಟಿಸ್ನಲ್ಲಿ ಕಾಲೇಜಿನ ಹೆಸರು ಹಾಗೂ ಪ್ರಾಂಶುಪಾಲರ ಡಿಜಿಟಲ್ ಸಹಿ ಕೂಡ ಇದೆ.
ಭದ್ರತಾ ಕಾರಣದಿಂದಾಗಿ ಈ ನೋಟಿಸ್ ತರಲಾಗಿದೆ. ಸಿಂಗಲ್ ವಿದ್ಯಾರ್ಥಿನಿಯರಿಗೆ ಕಾಲೇಜಿನೊಳಕ್ಕೆ ಪ್ರವೇಶ ಇರೋದಿಲ್ಲ. ಪ್ರತಿ ವಿದ್ಯಾರ್ಥಿನಿಯರು ತಮ್ಮ ಬಾಯ್ಫ್ರೆಂಡ್ ಜೊತೆಗಿರುವ ಇತ್ತೀಚಿನ ಫೋಟೋವನ್ನ ತೋರಿಸತಕ್ಕದ್ದು. ಪ್ರೀತಿಯನ್ನ ಹಂಚಿ ಎಂದು ನೋಟಿಸ್ನಲ್ಲಿ ಬರೆಯಲಾಗಿದೆ. ಈ ನೋಟಿಸ್ ಮೇಲೆ ಪ್ರೊ. ಆಶಿಷ್ ಶರ್ಮಾ, ಅಸೋಸಿಯೇಟ್ ಡೀನ್ರ ಡಿಜಿಟಲ್ ಸಹಿ ಕೂಡ ಇದೆ.
ಈ ನೋಟಿಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಕಾಲೇಜು ಪ್ರಾಂಶುಪಾಲ ಎಸ್.ಪಿ. ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುವ ನೋಟಿಸ್ ದುಷ್ಕರ್ಮಿಗಳ ಕೃತ್ಯವಾಗಿದೆ. ಕಾಲೇಜಿನ ಪ್ರತಿಷ್ಠೆಗೆ ಭಂಗ ತರುವ ಸಲುವಾಗಿ ಈ ಕೃತ್ಯ ಎಸಗಲಾಗಿದೆ. ಈ ನೋಟಿಸ್ಗೂ ಕಾಲೇಜಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.