ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಲಸಿಗರು ಮಹಾನಗರಗಳಿಂದ ತಮ್ಮ ಸ್ವಂತ ಪಟ್ಟಣ, ಗ್ರಾಮಗಳಿಗೆ ಮರಳಿದ್ದಾರೆ. ಇದೇ ವೇಳೆ ಇವರಿಗೆಲ್ಲ ಕೆಲಸ ಕೊಡುತ್ತಿರುವುದು ನರೇಗಾ ಯೋಜನೆ.
ಅಧಿಕೃತ ಅಂಕಿ – ಅಂಶದ ಪ್ರಕಾರ ದೇಶದ 116 ಜಿಲ್ಲೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಅತಿ ಹೆಚ್ಚಿನ ಬೇಡಿಕೆ ಬಂದಿದೆ. 2019ರಲ್ಲಿ ಇದೇ ಅವಧಿಗೆ ಹೋಲಿಸಿದರೆ ನರೇಗಾ ಅಡಿಯಲ್ಲಿ ಕೆಲಸದ ಬೇಡಿಕೆ ಈ ವರ್ಷ ಮೇ ತಿಂಗಳಲ್ಲಿ ಶೇಕಡಾ 86ಕ್ಕಿಂತ ಹೆಚ್ಚಾಗಿದೆ.
ಬಿಹಾರ, ಉತ್ತರ ಪ್ರದೇಶ ಸೇರಿ ಆರು ರಾಜ್ಯಗಳ ಈ 116 ಜಿಲ್ಲೆಗಳಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಪಡೆಯುವ ಕುಟುಂಬಗಳ ಸಂಖ್ಯೆ ಮೇ ತಿಂಗಳಲ್ಲಿ 89.83 ಲಕ್ಷಕ್ಕೆ ಏರಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಇದು 48.22 ಲಕ್ಷ ಇತ್ತು.
ಉದ್ಯೋಗ ಖಾತರಿ ಕಾಯ್ದೆ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ ಕೆಲವು ಜಿಲ್ಲೆಗಳಲ್ಲಿ ಕೆಲಸದ ಬೇಡಿಕೆ ಐದು ಪಟ್ಟು ಹೆಚ್ಚಾಗಿದೆ. ಬಿಹಾರದ 32 ಜಿಲ್ಲೆ, ಉತ್ತರ ಪ್ರದೇಶದ 31 ಜಿಲ್ಲೆ, ಮಧ್ಯಪ್ರದೇಶದ 24, ರಾಜಸ್ಥಾನದ 22, ಒಡಿಶಾದ ನಾಲ್ಕು ಮತ್ತು ಜಾರ್ಖಂಡ್‌ನ ಮೂರು ಜಿಲ್ಲೆಗಳು ಈ ಪಟ್ಟಿಯಲ್ಲಿ ಸೇರಿವೆ.
ಅತಿ ಹೆಚ್ಚು ಕೆಲಸದ ಬೇಡಿಕೆ ಉತ್ತರ ಪ್ರದೇಶದಿಂದ ಬಂದಿದ್ದು, ಈ ವರ್ಷ ಮೇ ತಿಂಗಳಲ್ಲಿ 31 ಜಿಲ್ಲೆಗಳಲ್ಲಿ 27.78 ಲಕ್ಷ ಕುಟುಂಬಗಳಿಗೆ ಕೆಲಸ ದೊರೆತಿದ್ದರೆ ಕಳೆದ ವರ್ಷ ಇದೇ ತಿಂಗಳಲ್ಲಿ ಇದು 6.71 ಲಕ್ಷ ಇತ್ತು.